ಸಮಗ್ರ ನ್ಯೂಸ್: ವಯನಾಡ್ ನಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ ಎರಡು ಗ್ರಾಮಗಳು ನಾಮಾವಶೇಷವಾಗಿದ್ದು, ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವವರ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿದಿದೆ. ಈ ಮಧ್ಯೆ ಮನೆ ಕೊಚ್ಚಿಕೊಂಡು ಹೋದರೂ 40 ದಿನದ ಪುಟ್ಟ ಹೆಣ್ಣು ಮಗು ಮತ್ತು ಆಕೆಯ ಆರು ವರ್ಷದ ಸಹೋದರ ವಿಕೋಪದಲ್ಲಿ ಬದುಕಿ ಉಳಿದಿರುವ ಪವಾಡ ಸದೃಶ ಘಟನೆ ವರದಿಯಾಗಿದೆ.
ಕುಟುಂಬದ ಆರು ಮಂದಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದರೂ, ಅನಾರ ಮತ್ತು ಮುಹಮ್ಮದ್ ಹಯಾನ್ ಬದುಕಿ ಉಳಿದಿದ್ದಾರೆ. ಅವರ ತಾಯಿ ತನ್ಝೀರಾ, ಪುಟ್ಟ ಮಗುವನ್ನು ರಕ್ಷಿಸುವ ಸಲುವಾಗಿ ಟೆರೇಸನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಪ್ರವಾಹದ ನೀರಿಗೆ ಜಾರಿದ್ದ ಮಹಿಳೆ ತನ್ನ ಮಗುವಿನ ಕೈಯನ್ನು ಹಿಡಿದುಕೊಂಡಿದ್ದರು. ಘಟನೆಯಲ್ಲಿ ಮಗು ಗಾಯಗೊಂಡಿದೆ. ಆರು ವರ್ಷದ ಮಗ ಹಯಾನ್ ನನ್ನು ನೀರಿನ ಸೆಳೆತ 100 ಮೀಟರ್ ದೂರಕ್ಕೆ ಒಯ್ದಿತ್ತು. ಆತನನ್ನು ರಕ್ಷಣಾ ಕಾರ್ಯಕರ್ತರು ರಕ್ಷಿಸಿದ್ದು, ಆತ ಬಾವಿಯ ವೈರ್ ನಲ್ಲಿ ನೇತಾಡುತ್ತಿದ್ದ.
ಎರಡು ಮಕ್ಕಳು ತಾಯಿಯ ಜತೆ ಮತ್ತೆ ಸೇರಿಕೊಂಡಿದ್ದು, ಈ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಮಹಿಳೆಯ ತಾಯಿ ಅಮೀನಾ ಮತ್ತು ಅಜ್ಜಿ ಫಾತಿಮಾ ಅವರ ಸಾವಿನಿಂದ ಕುಟುಂಬ ಆಘಾತಕ್ಕೊಳಗಾಗಿದೆ.