ಸಮಗ್ರ ನ್ಯೂಸ್: ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಲಾದ ನೂತನ ಸಂಸತ್ ಭವನ ಸೋರುತ್ತಿದ್ದು, ಇದರ ವಿಡಿಯೋ ವೈರಲ್ ಆದ ಬೆನ್ನಲ್ಲೇ ವಿಪಕ್ಷ ನಾಯಕರು ಪ್ರಧಾನಿ ಮೋದಿ ನೇತೃತ್ವದ ಸರ್ಕಾರವನ್ನು ವ್ಯಂಗ್ಯವಾಡಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಸಂಬಂಧ ಪೋಸ್ಟ್ ಮಾಡಿರುವ ಎಸ್ ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಈ ಹೊಸ ಸಂಸತ್ತಿಗಿಂತ ಹಳೆಯ ಸಂಸತ್ತು ಉತ್ತಮವಾಗಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕಟ್ಟಿದ ಸಂಸತ್ತಿನಲ್ಲಿ ನೀರು ಸುರಿಯುತ್ತಿರುವವರೆಗೂ ಹಳೆ ಸಂಸತ್ತಿನಲ್ಲಿ ಮತ್ತೆ ಏಕೆ ಕೆಲಸ ಮಾಡಬಾರದು ಅಂತ ಪ್ರಶ್ನೆ ಮಾಡಿದ್ದು, ಕೇಂದ್ರ ಸರ್ಕಾರದ ಕಾಲೆಳೆದಿದ್ದಾರೆ.
ಇನ್ನೂ ಕಾಂಗ್ರೆಸ್ ಸಂಸದ ಮಾಣಿಕ್ಕಂ ಠಾಗೋರ್ ಕೂಡ ಈ ಘಟನೆಯನ್ನು ಖಂಡಿಸಿದ್ದು, ಹೊರಗೆ ಪೇಪರ್ ಲೀಕ್ ಒಳಗೆ ನೀರು ಲೀಕ್ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆತ್ತಿಕೊಂಡಿದ್ದಾರೆ.
ನೀರು ಸೋರಿಕೆಯಾಗುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ನೆಟ್ಟಿಗರು ಹಲವು ಬಗೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಹೊಸದಾಗಿ ನಿರ್ಮಾಣಗೊಂಡಿರುವ ಕಟ್ಟಡಗಳಲ್ಲಿ ನೀರು ಸೋರಿಕೆ, ರಾಮ ಮಂದಿರದಲ್ಲಿ ಸೋರಿಕೆ, ಏರ್‌ಪೋರ್ಟ್‌ಗಳಲ್ಲಿ ಸೋರಿಕೆ ಮುಂತಾದವುಗಳನ್ನು ಹೋಲಿಕೆ ಮಾಡಿ ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಹೊಸ ಸಂಸತ್ ಕಟ್ಟಡಕ್ಕೆ ಪ್ರಧಾನಿ ನರೇಂದ್ರ ಮೋದಿಯವರು 2020ರ ಡಿಸೆಂಬರ್ 10ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. 2023ರ ಮೇ 28ರಂದು ಉದ್ಘಾಟನೆಗೊಂಡಿತ್ತು. ₹ 970 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಲಾಗಿತ್ತು.