ಸಮಗ್ರ ನ್ಯೂಸ್: ಶಿರಾಡಿಘಾಟ್‌ನಲ್ಲಿ ಗುಡ್ಡ ಕುಸಿತವಾಗಿದೆ. ಕೆಲವೇ ನಿಮಿಷಗಳ ಹಿಂದೆ ತೆರವಾಗಿದ್ದ ರಸ್ತೆ ಮತ್ತೆ ಬಂದ್ ಆಗಿದೆ. ಶಿರಾಡಿಘಾಟ್‌ನ ದೊಡ್ಡ ತಪ್ಪಲು ಬಳಿ ಆ.1ರ ಗುರುವಾರ ಮತ್ತೆ ಭೂಕುಸಿತವಾಗಿದ್ದು, ದೊಡ್ಡ ಸದ್ದಿನೊಂದಿಗೆ ಮಣ್ಣು ಕುಸಿದಿದೆ.
ಕಳೆದ ಮೂರು ದಿನಗಳಲ್ಲಿ ಪದೇ ಪದೇ ಭೂಮಿ ಕುಸಿಯುತಿದ್ದು, ಶಿರಾಡಿ ಘಾಟ್‌ನಲ್ಲಿ ಆತಂಕ ಹೆಚ್ಚಿದೆ. ಶಿರಾಡಿ ಘಾಟ್ ಕಡೆ ಪ್ರಯಾಣಿಸುವವರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
ಶಿರಾಡಿ ಘಾಟಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಜು.31ರ ಬುಧವಾರ ಸಂಜೆ ವೇಳೆಗೆ ಭೂ ಕುಸಿತವಾಗಿ 2 ಕಂಟೈನರ್ ಹಾಗೂ ಒಂದು ಟ್ಯಾಂಕರ್ ಮಣ್ಣಿನಲ್ಲಿ ಸಿಲುಕಿದ್ದರಿಂದ ಈ ಮಾರ್ಗದಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರ ಸ್ಥಗಿತ ಮಾಡಲಾಗಿತ್ತು.
ಜು.30ರ ಮಂಗಳವಾರ ಸಂಜೆಯಿಂದ ವಾಹನ ಸಂಚಾರ ಸ್ಥಗಿತ ಆಗಿತ್ತು. ಸತತ ಕಾರ್ಯಾಚರಣೆ ಬಳಿಕ ಬುಧವಾರ ಬೆಳಗ್ಗೆ ರಸ್ತೆಗಳಲ್ಲಿ ಸಾಲುಗಟ್ಟಿ ನಿಂತಿದ್ದ ವಾಹನಗಳ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.
ಬುಧವಾರ ಸಂಜೆ 5.30ರ ವರೆಗೂ ಏಕಮುಖ ಸಂಚಾರ ಪ್ರಕ್ರಿಯೆ ನಡೆಯುತ್ತಿತ್ತು. ಅನಂತರ ಪುನಃ ಗುಡ್ಡ ಕುಸಿತ ಉಂಟಾದ ಹಿನ್ನೆಲೆ 2 ಕಂಟೈನರ್, 1 ಟ್ಯಾಂಕರ್ ಮಣ್ಣಿನಡಿ ಸಿಲುಕಿದೆ. ಇದರಲ್ಲಿದ್ದ ಮೂವರು ಚಾಲಕರನ್ನು ಪೊಲೀಸರು ಹಾಗೂ ರಸ್ತೆ ಕಾಮಗಾರಿ ಸಿಬಂದಿ ರಕ್ಷಿಸಿದ್ದಾರೆ.