ಸಮಗ್ರ ನ್ಯೂಸ್: ಪುನೀತ್ ಕೆರೆಹಳ್ಳಿ ಬಂಧನವನ್ನು ವಿರೋಧಿಸಿ ಪ್ರತಿಭಟನೆಗೆ ಕರೆ ನೀಡಿ ಎಸಿಪಿ ಚಂದನ್ ಗೆ ಸವಾಲು ಹಾಕಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಭಾರೀ ಮುಖಭಂಗವಾಗಿದೆ. ಸವಾಲನ್ನು ಸ್ವೀಕರಿಸಿ ರಜೆಯ ಮೇಲೆ ಊರಿಗೆ ತೆರಳಿದ್ದರೂ ವಾಪಸ್ ಬಂದಿದ್ದ ಎಸಿಪಿ ಚಂದನ್, ಪ್ರತಾಪ್ ಸಿಂಹ ಎದುರಿನಲ್ಲಿಯೇ ಮತ್ತೆ ಪುನೀತ್ ಕೆರೆಹಳ್ಳಿಯನ್ನು ವಶಕ್ಕೆ ಪಡೆದು ವಾರ್ನ್ ಮಾಡಿ ಬಿಡುಗಡೆ ಮಾಡಿದ್ದಾರೆ.
ನಾಯಿ ಮಾಂಸ ವಿವಾದದಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬಂಧಿತನಾಗಿ ಜಾಮೀನು ಪಡೆದು ಹೊರಬಂದಿದ್ದ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ಮತ್ತೆ ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದಾರೆ. ಜಾಮೀನು ಪಡೆದು ಹೊರಬಂದ ಬಳಿಕ ಪುನೀತ್ ಕೆರೆಹಳ್ಳಿ ಪೊಲೀಸರ ಮೇಲೆ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದ.
ಪೊಲೀಸರು ನನಗೆ ಒಳಉಡುಪು ಸಹ ಬಿಚ್ಚಿ ಹಲ್ಲೆ ನಡೆಸಿದ್ದಾರೆ. ಎಲ್ಲಾ ದಾಖಲೆಗಳಿರುವ ಪೆನ್ ಡ್ರೈವ್ ಒಂದು ನನ್ನ ಬಳಿ ಇತ್ತು ಅದನ್ನು ಪೊಲೀಸರು ಕಿತ್ತುಕೊಂಡಿದ್ದಾರೆ ಎಂದು ಪುನೀತ್ ಕೆರೆಹಳ್ಳಿ ಆರೋಪಿಸಿದ್ದ. ಈಗ ಪೊಲೀಸರು ಮತ್ತೆ ಪುನೀತ್ ಕೆರೆಹಳ್ಳಿಯನ್ನು ಬಂಧನಕ್ಕೊಳಪಡಿಸಿದ್ದಾರೆ.
ಪುನೀತ್ ಕೆರೆಹಳ್ಳಿ ವಿರುದ್ದ ಪೊಲೀಸರು ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಇಂದು ಪೊಲೀಸ್ ಠಾಣೆಯ ಬಳಿ ಪ್ರತಿಭಟನೆಗೆ ಕರೆ ನೀಡಿದ್ದರು. ಪ್ರತಾಪ್ ಸಿಂಹ ಹಾಕಿದ್ದ ಸವಾಲನ್ನು ಸ್ವೀಕರಿಸಿದ ಎಸಿಪಿ ಚಂದನ್ ರಜೆಯನ್ನೂ ರದ್ದುಪಡಿಸಿ ಠಾಣೆಗೆ ಬಂದಿದ್ದರು.
ಠಾಣೆಯಲ್ಲಿ ಮಾತನಾಡಿದ ಪ್ರತಾಪ್ ಸಿಂಹ ತಪ್ಪು ಮಾಡಿದವರು ವಿರುದ್ಧ ಕ್ರಮ ಆಗಬೇಕಿತ್ತು. ಆದ್ರೆ ಪುನೀತ್ ಕೆರೆಹಳ್ಳಿ ವಿರುದ್ದವೇ ದೂರು ದಾಖಲಿಸಲಾಗಿದೆ. ಇವತ್ತು ಇಲ್ಲಿ ರಜಾಕ್ ಮೇಲೆ ಎಫ್‌ಐಆರ್ ಆಗಬೇಕಿತ್ತು , ಅದು ಆಗಿಲ್ಲ. ಈ ಬಗ್ಗೆ ನಾನು ಟ್ವೀಟ್ ಮಾಡಿದ್ದು, ಇಂದು ಅವರನ್ನು ಭೇಟಿ ಮಾಡಿದ್ದೇವೆ. ಡಿಸಿಪಿ ಜೊತೆ ಕಮಿಷನರ್ ಜೊತೆ ಮಾತನಾಡಿದ್ದೇವೆ. ಬೇಗನೆ ಎಸಿಪಿ ಚಂದನ್ ಮೇಲೆ ಕ್ರಮ ಆಗಬೇಕು. ಜೊತೆಗೆ ರಜಾಕ್ ಮೇಲೆ ಎಫ್‌ಐಆರ್ ಆಗಬೇಕು ಎಂದು ಪ್ರತಾಪ್ ಒತ್ತಾಯಿಸಿದ್ದಾರೆ.