ಸಮಗ್ರ ನ್ಯೂಸ್: ಉಜಿರೆಯಿಂದ ಮುಂಡಾಜೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿಯ ರಸ್ತೆಯ ಸೀಟು ಕಾಡು ಎಂಬಲ್ಲಿ ಬೊಲೆರೋ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಸಾವನ್ನಪ್ಪಿದ್ದು, ಬಾಲಕಿಯ ತಂದೆ ಗಂಭೀರ ಗಾಯಗೊಂಡ ಘಟನೆ ಜು.27ರಂದು ಸಂಜೆ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಉಜಿರೆ – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಮಂಜ ಗ್ರಾಮದ ಕುಡೆಂಚಿ ನಿವಾಸಿ ಗುರುಪ್ರಸಾದ್ ಗೋಖಲೆಯವರು ಮಗಳಾದ ಅನರ್ಘ್ಯ(13)ಳನ್ನು ಕೂರಿಸಿಕೊಂಡು ಮುಂಡಾಜೆ ಕಡೆ ಹೋಗುತ್ತಿದ್ದಾಗ ಕುಡಿದ ಮತ್ತಿನಲ್ಲಿ ಬೊಲೆರೋ ವಾಹನ ಚಲಾಯಿಸಿಕೊಂಡು ಬರುತ್ತಿದ್ದ ಚಾಲಕನು ತನ್ನ ವಾಹನದಲ್ಲಿ ನೇರವಾಗಿ ಹಿಂಬದಿಯ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಬೊಲೆರೋ ವಾಹನ ಬೈಕನ್ನು ಸುಮಾರು 30 ಮೀಟರಿಗೂ ಹೆಚ್ಚು ದೂರ ಎಳೆದುಕೊಂಡು ಹೋಗಿದೆ.
ಈ ವೇಳೆ ಬೈಕ್‌ನಲ್ಲಿದ್ದ ಅನರ್ಘ್ಯಳ ತಲೆ ಮೇಲೆಯೇ ಬೊಲೆರೋ ವಾಹನ ಹರಿದು ಹೋದ ಕಾರಣ ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಬಾಲಕಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಬಾಲಕಿ ಉಜಿರೆ ಎಸ್.ಡಿ.ಎಮ್ ಶಾಲೆಯ ಆರನೇ ತರಗತಿ ವಿದ್ಯಾರ್ಥಿನಿ ಎನ್ನಲಾಗಿದೆ.
ಅಪಘಾತವೆಸಗಿದ ನೆರಿಯದ ಬೊಲೆರೋ ಚಾಲಕ ಅಲ್ಲಿಂದ ಪರಾರಿಯಾಗಲೆತ್ನಿಸಿದ್ದು, ಸೀಟು ಕಾಡು ಬಸ್ ಸ್ಟ್ಯಾಂಡ್ ಬಳಿಯ ಒಳಗಿನ ರಸ್ತೆಯಲ್ಲಿ ಸಾಗಿದ್ದು, ಅಲ್ಲಿ ಪರಾರಿಯಾಗಲು ದಾರಿ ಸಿಗದ ಕಾರಣ ಹಿಂದಿರುಗಿ ಬರುವ ವೇಳೆ ಸ್ಥಳೀಯರು ವಾಹನವನ್ನು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನಾ ಸ್ಥಳಕ್ಕಾಗಮಿಸಿದ ಬೆಳ್ತಂಗಡಿ ಸಂಚಾರಿ ಪೊಲೀಸರು ತನಿಖೆಯನ್ನು ಆರಂಭಿಸಿದ್ದು, ಬೊಲೆರೋವಾಹದಲ್ಲಿದ್ದ ವಾಹನದ ಮಾಲೀಕ ನೆರಿಯದ ಪ್ರಶಾಂತ್ ಸೇರಿ ಮೂವರನ್ನು ಸಾರ್ವಜನಿಕರು ಸಿನಿಮಿಯ ಸೈಲಿಯಲ್ಲಿ ಹಿಡಿದು ಪೊಲೀಸ್ ವಶಕ್ಕೆ ನೀಡಿದ್ದಾರೆ.