ಸಮಗ್ರ ನ್ಯೂಸ್: ರೈಲು ಹಳಿಯ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣ ಸಮೀಪದ ಎಡಕುಮೇರಿ- ಕಡಗರವಳ್ಳಿ ನಡುವಿನ ದೋಣಿಗಲ್ ಎಂಬಲ್ಲಿ ಮಣ್ಣು ಕುಸಿದಿದೆ. ನಿರಂತರ ಮಳೆಯಿಂದಾಗಿ ಹಳಿಯ ಕೆಳಭಾಗದಲ್ಲಿ ಮಣ್ಣು ಕುಸಿತ ಉಂಟಾದ ಪರಿಣಾಮ ಮಂಗಳೂರು-ಬೆಂಗಳೂರು ನಡುವಿನ ರೈಲು ಶುಕ್ರವಾರ ಸಂಜೆ ಸ್ವಲ್ಪ ಹೊತ್ತು ಸ್ಥಗಿತಗೊಂಡಿತು. ನಂತರ ಬದಲಿ ಮಾರ್ಗದ ಮೂಲಕ ಸಾಗಿದವು.
ಸಂಜೆ 5.30ಕ್ಕೆ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಿಂದ ಹೊರಟಿದ್ದ ವಿಜಯಪುರ ಎಕ್ಸ್‌ಪ್ರೆಸ್ ಈ ಘಟನೆಯಿಂದಾಗಿ ವಾಪಸಾಯಿತು. ನಂತರ ಕಾರವಾರ, ಮಡಗಾಂವ್ ಜಂಕ್ಷನ್, ಕುಳೆಮ್, ಕ್ಯಾಸಲ್‌ರಾಕ್, ಲೋಂಡ ಜಂಕ್ಷನ್ ಮೂಲಕ ಹುಬ್ಬಳ್ಳಿಗೆ ತೆರಳಿತು. ಕಾರವಾರ, ಕಣ್ಣೂರು, ಮುರುಡೇಶ್ವರಕ್ಕೆ ಬೆಂಗಳೂರಿನಿಂದ ಹೊರಟ ರೈಲುಗಳ ಮಾರ್ಗವನ್ನೂ ಬದಲಿಸಲಾಯಿತು.
ಹಿರಿಯ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ದುರಸ್ತಿ ಕಾರ್ಯ ನಡೆಯುತ್ತಿರುವುದಾಗಿ ತಿಳಿಸಿದ್ದಾರೆ.
ದಿಢೀರ್ ಆಗಿ ರೈಲು ಸ್ಥಗಿತಗೊಂಡ ಮಾಹಿತಿ ಲಭಿಸುತ್ತಿದ್ದಂತೆ ಪ್ರಯಾಣಿಕರು ಗೊಂದಲಕ್ಕೀಡಾದರು. ಸ್ಪಷ್ಟ ಮಾಹಿತಿಗಾಗಿ ಪರದಾಡಿದರು. ಕೆಲವರು ನಿಲ್ದಾಣದಲ್ಲೇ ಉಳಿದರು. ಕೆಲವರು ಬದಲಿ ವ್ಯವಸ್ಥೆ ಮಾಡಿ ಪ್ರಯಾಣ ಮುಂದುವರಿಸಿದರು.