ಸಮಗ್ರ ನ್ಯೂಸ್: ರಾಜಸ್ಥಾನದಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಪ್ರತಿ ಮನೆಗೆ ಮಾಸಿಕ 100 ಯುನಿಟ್ ಉಚಿತ ವಿದ್ಯುತ್ ಹಾಗೂ ಮಹಿಳೆಯರಿಗೆ ಉಚಿತ ಮೊಬೈಲ್ ಫೋನ್ ಸ್ಕೀಂಗಳಿಗೆ ಈಗಿನ ಬಿಜೆಪಿ ಸರ್ಕಾರ ಬ್ರೇಕ್ ಹಾಕಿದ್ದು, ಹಳೆಯ ಫಲಾನುಭವಿಗಳಿಗೆ ಯೋಜನೆ ಮುಂದುವರಿಸಿ ಹೊಸಬರಿಗೆ ಯೋಜನೆ ಅನ್ವಯ ಆಗದಂತೆ ನಿಯಮ ಮಾರ್ಪಡಿಸಿದೆ.
ಈ ವರ್ಷದ ಕೊನೆಯಲ್ಲಿ ನಡೆದ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಕಳೆದ ವರ್ಷ ಮೇ ತಿಂಗಳಲ್ಲಿ ಕಾಂಗ್ರೆಸ್‌ನ ಅಶೋಕ್ ಗೆಹ್ಲೋಟ್ ಸರ್ಕಾರ ಪ್ರತಿ ಮನೆಗೆ ಮಾಸಿಕ 100 ಯೂನಿಟ್ ಉಚಿತ ವಿದ್ಯುತ್ ಘೋಷಿಸಿತ್ತು. ಆದರೂ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಸೋತಿತ್ತು.
ಈ ವರ್ಷದ ಮಾರ್ಚ್‌ವರೆಗೆ ಈ ಯೋಜನೆಗೆ 98.23 ಲಕ್ಷ ಕುಟುಂಬಗಳು ಹೆಸರು ನೋಂದಾಯಿಸಿವೆ. ಅವುಗಳಿಗೆ ಮಾತ್ರ ಉಚಿತ ವಿದ್ಯುತ್ ಮುಂದುವರಿಸಲು ಈಗಿನ ಭಜಲ್‌ಲಾಲ್ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರ ನಿರ್ಧರಿಸಿದೆ. ಆದರೆ ಈ ಯೋಜನೆಯಡಿ ಇನ್ನು ಹೊಸ ನೋಂದಣಿಗೆ ಅವಕಾಶವಿಲ್ಲ. ಅದೇ ರೀತಿ, ಪ್ರತಿ ಮನೆಯ ಒಬ್ಬ ಮಹಿಳೆಗೆ ಮೊಬೈಲ್ ಫೋನ್ ನೀಡುವ ಗೆಹ್ಲೋಟ್ ಅವರ ಮತ್ತೊಂದು ಯೋಜನೆಗೆ ತಡೆ ನೀಡಲಾಗಿದೆ. ಈ ಯೋಜನೆಯನ್ನು 2023ರ ಆಗಸ್ಟ್‌ನಲ್ಲಿ ಪ್ರಾರಂಭಿಸಲಾಗಿತ್ತು ಮತ್ತು ಅಕ್ಟೋಬರ್ ವರೆಗೆ 24.56 ಲಕ್ಷ ಮಹಿಳೆಯರಿಗೆ ಮೊಬೈಲ್ ಫೋನ್‌ಗಳನ್ನು ನೀಡಲಾಗಿದೆ.
ಕಳೆದ ಸೋಮವಾರ (ಜುಲೈ 22) ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಶರ್ಮಾ ಸರ್ಕಾರದ ಲಿಖಿತ ಪ್ರತಿಕ್ರಿಯೆಯಲ್ಲಿ ಎರಡು ನಿರ್ಧಾರಗಳು ಬೆಳಕಿಗೆ ಬಂದಿವೆ. ಶರ್ಮಾ ಸರ್ಕಾರದ ಈ ನಿರ್ಣಯಗಳನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ.