ಸಮಗ್ರ ನ್ಯೂಸ್: ಇತ್ತೀಚೆಗೆ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಫೋನ್ ಪೇ ಸಿಇಒ ಸಮೀರ್ ನಿಗಮ್ ಇದೀಗ ಕ್ಷಮೆಯಾಚಿಸಿದ್ದಾರೆ. ಈ ಕಾರಣಕ್ಕೆ ಕರ್ನಾಟಕದಾದ್ಯಂತ ಬಾಯ್ಕಾಟ್ ಫೋನ್ ಪೇ (Boycott PhonePe) ಎಂಬ ಅಭಿಯಾನ ಆರಂಭವಾದ ಬೆನ್ನಲ್ಲೇ, ಸಮೀರ್ ನಿಗಮ್ ಅವರು ಎಕ್ಸ್ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಕನ್ನಡಿಗರ ಕ್ಷಮೆಯಾಚಿಸಿದ್ದಾರೆ.
ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಸಮೀರ್ ನಿಗಮ್ ಅವರು ಪೋಸ್ಟ್ ಮಾಡಿದ್ದಾರೆ. “ಕಳೆದ ವಾರ ನಾನು ಉದ್ಯೋಗ ಮೀಸಲಾತಿ ವಿಧೇಯಕದ ಕುರಿತು ನೀಡಿದ ಹೇಳಿಕೆ ಬಗ್ಗೆ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಮಾಧ್ಯಮಗಳ ಲೇಖನಗಳನ್ನು ಓದಿದೆ. ನನ್ನ ಬಗ್ಗೆ ವೈಯಕ್ತಿಕವಾಗಿ ಟೀಕಿಸಿದ್ದನ್ನು ಗಮನಿಸಿದೆ. ಆದರೆ, ನಾನೊಂದು ವಿಷಯವನ್ನು ಹೇಳಲು ಇಷ್ಟಪಡುತ್ತೇನೆ. ನನಗೆ ಕರ್ನಾಟಕ ಹಾಗೂ ಕರ್ನಾಟಕದ ಜನರನ್ನು ಅವಮಾನಿಸುವುದು ಎಂದಿಗೂ ನನ್ನ ಉದ್ದೇಶ ಆಗಿಲ್ಲ. ಇಷ್ಟಾದರೂ, ನನ್ನ ಹೇಳಿಕೆಯಿಂದ ಯಾರಿಗಾದರೂ ನೋವುಂಟಾಗಿದ್ದರೆ, ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ” ಎಂದಿದ್ದಾರೆ.
ಕನ್ನಡ ಸೇರಿ ದೇಶದ ಎಲ್ಲ ಭಾಷೆಗಳ ಮೇಲೆ ನನಗೆ ಹೆಚ್ಚು ಗೌರವ ಇದೆ. ಭಾಷಾ ವೈವಿಧ್ಯತೆಯು ಭಾರತದ ಶ್ರೀಮಂತ ಪರಂಪರೆಯಾಗಿದೆ. ದೇಶದ ಪ್ರತಿಯೊಬ್ಬರೂ ಸ್ಥಳೀಯ ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಪಾಲಿಸಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ. ಬೆಂಗಳೂರಿನಲ್ಲಿ ಸ್ಥಾಪನೆಯಾದ ದೇಶದ ಸ್ಟಾರ್ಟಪ್‌ಗಳು, ಗೂಗಲ್, ಆಪಲ್, ಅಮೆಜಾನ್, ಮೈಕ್ರೋಸಾಫ್ಟ್‌ನಂತಹ ಕಂಪನಿಗಳು ಲಕ್ಷ ಡಾಲರ್ ಸಂಸ್ಥೆಗಳಾಗಿ ಹೊರಹೊಮ್ಮಿವೆ. ಕರ್ನಾಟಕ ಹಾಗೂ ಬೆಂಗಳೂರಿನಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಸುವುದು ನನ್ನ ಗುರಿಯಾಗಿದೆ. ಇದಕ್ಕೆ ಎಲ್ಲರ ಸಹಕಾರವಿರಲಿ” ಎಂಬುದಾಗಿ ಪೋಸ್ಟ್ ಮಾಡಿದ್ದಾರೆ.