ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪ್ರತ್ಯೇಕ ಪ್ರಾಧಿಕಾರ ರಚಿಸುವ ನಿರ್ಧಾರದಿಂದ ಹಿಂದೆ ಸರಿದಿರುವ ರಾಜ್ಯ ಸರಕಾರ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಕರಾವಳಿಯ ಪ್ರಮುಖ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚಿಸಲು ಮುಂದಾಗಿದೆ.
ರಾಜ್ಯದಲ್ಲೇ ಅತೀ ಹೆಚ್ಚು ಆದಾಯ ತರುವ ಎ ಗ್ರೇಡ್‌ಗೆ ಸೇರಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ರಚಿಸಲು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಆಯುಕ್ತರು ಅಧಿಸೂಚನೆ ಹೊರಡಿಸಿದ್ದಾರೆ. ಆಗಸ್ಟ್ 3ರ ಒಳಗೆ ಸಮಿತಿಯ ಸದಸ್ಯತ್ವಕ್ಕೆ ಭಕ್ತಾದಿಗಳು, ಸಾರ್ವಜನಿಕರು ಅರ್ಜಿ ಸಲ್ಲಿಸಬಹುದು ಎಂದು ಆಯುಕ್ತರು ಜು.16ರಂದು ಅಧಿ ಸೂಚನೆ ಹೊರಡಿಸಿದ್ದಾರೆ.
ಕುಕ್ಕೆ ಕ್ಷೇತ್ರಕ್ಕೆ ಪ್ರಾಧಿಕಾರ ರಚನೆ ಮಾಡಲು ರಾಜ್ಯ ಮಟ್ಟದಲ್ಲಿ ಪ್ರಯತ್ನ ನಡೆದಿದ್ದು, ಒಂದು ಹಂತದಲ್ಲಿ ಸರಕಾರ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಿತ್ತು. ಮಲೆ ಮಾದೇಶ್ವರ ಪ್ರಾಧಿಕಾರದ ಮಾದರಿ ಚರ್ಚೆಗೆ ಬಂದಿತ್ತು. ಇದಕ್ಕೆ ಸುಬ್ರಹ್ಮಣ್ಯದ ಸ್ಥಳೀಯ ನಾಗರಿಕ ವಲಯದಿಂದ ಪ್ರಬಲ ವಿರೋಧ ವ್ಯಕ್ತವಾಗಿತ್ತು. ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರುಗಳಿಂದಲೂ ಆಕ್ಷೇಪ ವ್ಯಕ್ತವಾಗಿತ್ತು. ಕುಕ್ಕೆಗೆ ಬಂದಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದ ನಿಯೋಗ ಪ್ರಾಧಿಕಾರದ ಬದಲು ವ್ಯವಸ್ಥಾಪನಾ ಸಮಿತಿಯನ್ನೇ ರಚಿಸುವಂತೆ ಮನವಿ ಮಾಡಿತ್ತು.
ಕೊನೆಗೂ ಸ್ಥಳೀಯರ ಭಾವನೆಗೆ ಸರಕಾರ ಸ್ಪಂದಿಸಿದ್ದು, ವ್ಯವಸ್ಥಾಪನಾ ಸಮಿತಿ ರಚನೆಗೆ ಮುಂದಾಗಿದೆ. ಜೂನ್ 24ರಂದು ಮುಜರಾಯಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಧಾರ್ಮಿಕ ಪರಿಷತ್‌ನ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ಅಧಿನಿಯಮ 2011ರ ಸೆಕ್ಷನ್ 25ರ ಅನ್ವಯ ವ್ಯವಸ್ಥಾಪನಾ ಸಮಿತಿ ರಚಿಸಲು ಆಸಕ್ತ ಭಕ್ತಾದಿಗಳು, ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಆಯುಕ್ತರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ. 2024ರ ಮಾ. 4ರಂದು ಕುಕ್ಕೆ ದೇವಳದ ವ್ಯವಸ್ಥಾಪನಾ ಸಮಿತಿಯ ಅವಧಿ ಮುಗಿದಿತ್ತು. ಸಮಿತಿ ಅವಧಿ ಮುಗಿದ ರಾಜ್ಯದ 16 ಎ ಗ್ರೇಡ್ ದೇವಾಲಯಗಳು ಸೇರಿದಂತೆ ರಾಜ್ಯದ ಒಟ್ಟು 40 ಎ ಗ್ರೇಡ್‌ನ ದೇವಸ್ಥಾನಗಳ ಸಮಿತಿ ರಚನೆಗೆ ಆಹ್ವಾನಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ, ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ, ಮಂಗಳೂರು ಮರೋಳಿ ಸೂರ್ಯನಾರಾಯಣ ದೇವಸ್ಥಾನ, ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಾಲಯ, ಬಂಟ್ವಾಳ ತಾಲೂಕು ಕಾವಳ ಮುಡೂರು ಗ್ರಾಮದ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಾಲಯ ಸೇರಿದಂತೆ ಅವಧಿ ಮುಗಿದ 16 ದೇವಾಲಯಗಳ ವ್ಯವಸ್ಥಾಪನಾ ಸಮಿತಿಗೆ ಇಲಾಖೆ ಅರ್ಜಿ ಆಹ್ವಾನಿಸಿದೆ.
ಇದಲ್ಲದೆ 2023ರಲ್ಲಿ ಆಹ್ವಾನಿಸಿದ ಸಂದರ್ಭ ಅರ್ಜಿ ಸಲ್ಲಿಕೆಯಾಗದ ಕಾರಣ ರಾಜ್ಯದ 23 ಎ ದೇವಾಲಯಗಳಿಗೆ ಮರು ಅರ್ಜಿ ಆಹ್ವಾನಿಸಲಾಗಿದ್ದು, ಇದರಲ್ಲಿ ಮಂಗಳೂರಿನ ಪಾಂಡೇಶ್ವರ ಶ್ರೀ ಮಹಾಲಿಂಗೇಶ್ವರ ದೇವಾಲಯ, ಉಡುಪಿಯ ಕಡಿಯಾಳಿ ದೇವಸ್ಥಾನವೂ ಶ್ರೀ ಮಹಿಷಮರ್ದಿನಿ ದೇವಸ್ಥಾನವೂ ಸೇರಿದೆ.