ಸಮಗ್ರ ನ್ಯೂಸ್: ತೈಲ ತುಂಬಿದ್ದ ಹಡಗೊಂದು ಸಮುದ್ರದಲ್ಲಿ ಮುಳುಗಿರುವ ಘಟನೆ ಒಮನ್‌ನಲ್ಲಿ ನಡೆದಿದೆ. ಈ ಭಾರೀ ದುರ್ಘಟನೆಯಲ್ಲಿ 13 ಭಾರತೀಯರು ಸೇರಿದಂತೆ ಒಟ್ಟು 16 ನೌಕಾ ಸಿಬ್ಬಂದಿ ಕಣ್ಮರೆಯಾಗಿದ್ದಾರೆ. ಈ ಬಗ್ಗೆ ಸಾಗರ ಭದ್ರತಾ ಕೇಂದ್ರ(MSC) ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದು, ನೌಕೆಯಲ್ಲಿದ್ದ ಇತರ ಮೂವರ ಸಿಬ್ಬಂದಿಗಳು ಶ್ರೀಲಂಕಾ ಮೂಲದವರು ಎನ್ನಲಾಗಿದೆ.
ಕೊಮೊರೊಸ್-ಧ್ವಜದ ತೈಲ ಟ್ಯಾಂಕರ್ ರಾಸ್ ಮದ್ರಕಾದಿಂದ ಆಗ್ನೇಯಕ್ಕೆ 25 ನಾಟಿಕಲ್ ಮೈಲುಗಳಷ್ಟು ದೂರದಲ್ಲಿರುವ ಡುಕ್ಮ್ ಬಂದರು ಪಟ್ಟಣಕ್ಕೆ ಸಮೀಪದಲ್ಲಿ ಮುಳುಗಡೆಯಾಗಿದೆ ಎಂದು MSC X ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದೆ. ಇನ್ನು ದುಕ್ಮ್ ಪಟ್ಟಣ ಒಮನ್ ಆಗ್ನೇ ಭಾಗದಲ್ಲಿದೆ. ಇನ್ನು ಮುಳುಗಡೆಯಾಗಿರುವ ಹಡಗನ್ನು ಪ್ರೆಸ್ಟೀಜ್ ಫಾಲ್ಕನ್ ಎಂದು ಗುರುತಿಸಲಾಗಿದ್ದು, ಅದರಲ್ಲಿ ಸಿಬ್ಬಂದಿ ಕಣ್ಮರೆಯಾಗಿದ್ದು, ಅವರಿಗಾಗಿ ಹುಡುಕಾಟ ಮುಂದುವರೆದಿದೆ.
ಮತ್ತೊಂದೆಡೆ ಒಮಾನ್‌ನ ರಾಜಧಾನಿ ಮಸ್ಕತ್‌ನಲ್ಲಿರುವ ವಾದಿ ಕಬೀರ್ ಪ್ರದೇಶದ ಮಸೀದಿಯೊಂದರಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ. ಘಟನೆಯಲ್ಲಿ ಭಾರತೀಯ ಪ್ರಜೆ ಸೇರಿದಂತೆ ಒಟ್ಟು ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ನೂರಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಒಮಾನ್’ನ ಶಿಯಾ ಮುಸ್ಲಿಂ ಮಸೀದಿಯ ಮೇಲೆ ಸೋಮವಾರ ತಡರಾತ್ರಿ ನಡೆದ ದಾಳಿಯಲ್ಲಿ ಮೂವರು ದಾಳಿಕೋರರು ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡಿನ ದಾಳಿಯಲ್ಲಿ ಮೃತಪಟ್ಟವರಲ್ಲಿ ನಾಲ್ವರು ಪಾಕಿಸ್ತಾನಿ ಪ್ರಜೆಗಳು ಮತ್ತು ಒಬ್ಬ ಪೊಲೀಸ್ ಸೇರಿದ್ದಾರೆ ಎಂದು ಪಾಕಿಸ್ತಾನ ಮತ್ತು ಒಮಾನ್ ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿ ಸೇರಿದಂತೆ ವಿವಿಧ ರಾಷ್ಟ್ರಗಳ 28 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.