ಸಮಗ್ರ ನ್ಯೂಸ್: ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ ಬಳಿ ಭಾರೀ ಪ್ರಮಾಣ ಗುಡ್ಡ ಕುಸಿತ ಸಂಭವಿಸಿದ್ದು, ಒಂದೇ ಕುಟುಂಬದ ಐವರು ಸೇರಿ ಒಟ್ಟು ಏಳು ಮಂದಿ ಮಣ್ಣನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ರಾಷ್ಟ್ರೀಯ ಹೆದ್ದಾರಿಯ 66ರಲ್ಲಿ ಐಆರ್ ಬಿ ಕಂಪೆನಿ ಹೆದ್ದಾರಿ ಅಗಲೀಕರಣಕ್ಕಾಗಿ ರಸ್ತೆ ಪಕ್ಕದ ಗುಡ್ಡವನ್ನು ಭಾರೀ ಪ್ರಮಾಣದಲ್ಲಿ ಅಗೆಯಲಾಗಿತ್ತು. ಕಳೆದೆರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಈ ಗುಡ್ಡ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಮನೆಯ ಮೇಲೆ ಭಾರೀ ಪ್ರಮಾಣದ ಮಣ್ಣು ಕುಸಿದುಬಿದ್ದ ಪರಿಣಾಮ ಐವರು ಅದರಡಿ ಸಿಲುಕಿರುವ ಶಂಕೆ ಇದೆ. ಈ ವೇಳೆ ಹೆದ್ದಾರಿ ಬದಿಯಲ್ಲಿ ಕ್ಯಾಂಟೀನ್ ವೊಂದರ ಪಕ್ಕದಲ್ಲಿ ನಿಲ್ಲಿಸಿದ್ದ ಟ್ಯಾಂಕರ್ ವೊಂದು ಮಣ್ಣಿನ ರಭಸಕ್ಕೆ ಗಂಗಾವಳಿ ನದಿಗೆ ಕೊಚ್ಚಿಹೋಗಿದೆ. ಅದರಲ್ಲಿದ್ದ ಚಾಲಕ ಹಾಗೂ ಕ್ಲೀನರ್ ಸಹ ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ.
ಕಾರವಾರ ತಾಲೂಕಿನ ಕಿನ್ನರ ಗ್ರಾಮದ ನಿರಾಕಾರ ದೇವಾಲುದ ಬಳಿ ಸಹ ಗುಡ್ಡ ಕುಸಿತವಾಗಿದ್ದು, ಪಕ್ಕದಲ್ಲೆ ಇದ್ದ ಹಂಚಿನ ಮನೆಗೆ ಸಂಪೂರ್ಣ ಹಾನಿಯಾಗಿದೆ. ಮನೆಯವರು ಇಲ್ಲಿ ಸಿಲುಕಿದ್ದು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.