ಸಮಗ್ರ ನ್ಯೂಸ್: ಏಳನೇ ವೇತನ ಆಯೋಗದ ಶಿಫಾರಸನ್ನು ಜಾರಿಗೊಳಿಸಲು ಸರ್ಕಾರ ತೀರ್ಮಾನಿಸಿದ್ದು, ಪರಿಷ್ಕೃತ ವೇತನ ಶ್ರೇಣಿ ಆಗಸ್ಟ್ 1ರಿಂದ ನೌಕರರಿಗೆ ಸಿಗಲಿದೆ.
ವೇತನ ಪರಿಷ್ಕರಣೆಗಾಗಿ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ನೇತೃತ್ವದ ಏಳನೇ ವೇತನ ಆಯೋಗವನ್ನು ಸರ್ಕಾರ ರಚಿಸಿತ್ತು. ಶೇಕಡ 31ರಷ್ಟು ತುಟ್ಟಿಭತ್ಯೆಯನ್ನು ಮೂಲವೇತನದಲ್ಲಿ ವಿಲೀನಗೊಳಿಸುವ ಜತೆಗೆ, ಶೇ 27.50ರಷ್ಟು ಫಿಟ್‌ಮೆಂಟ್ ನೀಡುವಂತೆ ಆಯೋಗ ಶಿಫಾರಸು ಮಾಡಿತ್ತು. 2023ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಶೇ 17ರಷ್ಟು ಮಧ್ಯಂತರ ಪರಿಹಾರ ನೀಡುವ ನಿರ್ಧಾರವನ್ನು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಕೈಗೊಂಡಿತ್ತು. ಬಾಕಿ ಉಳಿದಿರುವ ಶೇ 10.50ರಷ್ಟು ನೀಡಲು ಸೋಮವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
2022ರ ಜುಲೈನಿಂದ ಪೂರ್ವಾನ್ವಯವಾಗುವಂತೆ ವೇತನ ಪರಿಷ್ಕರಣೆಯನ್ನು ಜಾರಿ ಮಾಡುವಂತೆ ಆಯೋಗ ಶಿಫಾರಸು ಮಾಡಿತ್ತು. ಆಯೋಗದ ಬಹುತೇಕ ಶಿಫಾರಸುಗಳಿಗೆ ಒಪ್ಪಿಗೆ ನೀಡಲಾಗಿದೆ ಎಂದೂ ಮೂಲಗಳು ಹೇಳಿವೆ.
ಈಗಾಗಲೇ ಶೇ 17ರಷ್ಟು ವೇತನ ಕೊಡಲಾಗುತ್ತಿದೆ. ಅದಕ್ಕಾಗಿ, ವಾರ್ಷಿಕ ₹10 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ. ಆಯೋಗದ ಶಿಫಾರಸಿನಂತೆ ಶೇ 27.50ಕ್ಕೆ ಹೆಚ್ಚಿಸಿದರೆ ವಾರ್ಷಿಕ ಸುಮಾರು ₹8 ಸಾವಿರ ಕೋಟಿ ಹೆಚ್ಚುವರಿಯಾಗಿ ಬೇಕಾಗುತ್ತದೆ ಎನ್ನಲಾಗಿದೆ.