ಸಮಗ್ರ ನ್ಯೂಸ್: ಬ್ಯಾಂಕಿಂಗ್ ಕ್ಷೇತ್ರದಲ್ಲಿ ‘ಸುಧಾರಣೆ’ ತರುವ ಹಿನ್ನಲೆಯಲ್ಲಿ ಸರ್ಕಾರಿ ಸ್ವಾಮ್ಯದಲ್ಲಿರುವ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲು ಅನುವಾಗುವ ಮಹತ್ವದ ತಿದ್ದುಪಡಿ ವಿಧೇಯಕವನ್ನು ಕೇಂದ್ರ ಬಜೆಟ್ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆ. ಜುಲೈ 22 ರಿಂದ ಸಂಸತ್ ಅಧಿವೇಶನ ಆರಂಭವಾಗಲಿದೆ. ಜು.23ರಂದು ಬಜೆಟ್ ಮಂಡನೆ ನಡೆಯಲಿದೆ.
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ಮತ್ತು ಇತರ ಕಾಯ್ದೆಗಳಲ್ಲಿ ಸರ್ಕಾರ ಬ್ಯಾಂಕಿಂಗ್ ಕಾಯ್ದೆಗಳಲ್ಲಿ ತಿದ್ದುಪಡಿಗೆ ಮುಂದಾಗಿದೆ. ಇದಲ್ಲದೆ, ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಖಾಸಗೀಕರಣಕ್ಕಾಗಿ ‘ಬ್ಯಾಂಕಿಂಗ್ ಕಂಪನಿಗಳ (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ-1970’ ಮತ್ತು ’ಬ್ಯಾಂಕಿಂಗ್ ಕಂಪನಿಗಳ (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ- 1980’ಕ್ಕೆ ತಿದ್ದುಪಡಿಗಳ ಅಗತ್ಯವಿದೆ. ಈ ಕಾಯ್ದೆಗಳು 2 ಹಂತದಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣಕ್ಕೆ ಕಾರಣವಾಗಿದ್ದವು, ಇದೀಗ ಆ ಕಾನೂನಿನಲ್ಲಿ ತಿದ್ದುಪಡಿ ತರುವುದರ ಮೂಲಕ ಬ್ಯಾಂಕುಗಳ ಖಾಸಗೀಕರಣಕ್ಕೆ ಚಿಂತನೆ ನಡೆದಿದೆ ಎನ್ನಲಾಗಿದೆ.
ಸಂಸತ್ತಿನಲ್ಲಿ ಈ ತಿದ್ದುಪಡಿಗಳು ಅಂಗೀಕಾರವಾದರೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿನ ಸರ್ಕಾರದ ಪಾಲು ಈಗಿನ ಶೇ.51ಕ್ಕಿಂತ ಕಡಿಮೆ ಮಾಡಲು ಸರ್ಕಾರಕ್ಕೆ ಅವಕಾಶ ಸಿಗಲಿದೆ. ಇದು ಬ್ಯಾಂಕ್‌ಗಳ ಖಾಸಗೀಕರಣ ಪ್ರಕ್ರಿಯೆಯನ್ನು ಸುಲಭಗೊಳಿಸಲಿದೆ. ಈ ಹಿಂದೆ ಸರ್ಕಾರ ಹಲವು ಸರ್ಕಾರಿ ಬ್ಯಾಂಕ್‌ಗಳನ್ನು ಇತರ ಸರ್ಕಾರಿ ಬ್ಯಾಂಕ್‌ಗಳಲ್ಲಿ ವಿಲೀನ ಮಾಡಿತ್ತು. ಆದರೆ, ಈಗಿನ ಸುಧಾರಣೆಯಿಂದ ಬ್ಯಾಂಕುಗಳ ಆಡಳಿತದ ಸುಧಾರಣೆ ಆಗಬಹುದು ಮತ್ತು ಹೂಡಿಕೆದಾರರಿಗೆ ನೆರವಾಗಬಹುದು ಎಂದು ಸರ್ಕಾರದ ಮೂಲಗಳು ಹೇಳಿವೆ.