ಸಮಗ್ರ ನ್ಯೂಸ್: ಜುಲೈ 10ರಂದು ಚಾಮರಾಜನಗರದಲ್ಲಿ ನಡೆದಿದ್ದ ಕಾಂಗ್ರೆಸ್ ಕೃತಜ್ಞತಾ ಸಮಾವೇಶದಲ್ಲಿ ರೈತರು ಮತ್ತು ಆಮ್ಲಜನಕ ದುರಂತದ ಸಂತ್ರಸ್ತರು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದ ಮನವಿ ಪತ್ರಗಳು ಕಸದ ರಾಶಿಯಲ್ಲಿ ಪತ್ತೆಯಾಗಿವೆ.
ವಿವಿಧ ಬೇಡಿಕೆಗಳನ್ನು ಈಡೇರಿಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರು ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ್ದರು. ಈ ಅರ್ಜಿಗಳು ಕಸದ ರಾಶಿಯಲ್ಲಿ ಮತ್ತು ಡಾ.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಬಿದ್ದಿವೆ. ಸಾರ್ವಜನಿಕರು, ರೈತರು ಗಂಟೆಗಟ್ಟಲೆ ಕಾದು ಸಿಎಂಗೆ ಮನವಿ ಪತ್ರ ಸಲ್ಲಿಸಿದ್ದರೂ ಮನವಿ ಪತ್ರಗಳು ಕಸದ ರಾಶಿಯಲ್ಲಿ ಪತ್ತೆಯಾಗಿವೆ.
ಇದು ದುರಂಹಕಾರದ ಪರಮಾವಧಿ ಎಂದು ರೈತ ಸಂಘಗಳು ಆಕ್ರೋಶ ವ್ಯಕ್ತಪಡಿಸಿದ್ದು, ಸಿದ್ದರಾಮಯ್ಯ ಕೂಡಲೇ ಜನರ ಕ್ಷಮೆಯಾಚಿಸಬೇಕು ಇಲ್ಲವಾದಲ್ಲಿ ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ನೀಡಿದಾಗ ಕಪ್ಪು ಬಾವುಟ ಹಾರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.