ಸಮಗ್ರ ನ್ಯೂಸ್:ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಂಘದಿಂದ ಪತ್ರಿಕಾ ದಿನಾಚರಣೆಯು ಸುಳ್ಯದ ಕನ್ನಡ ಭವನದಲ್ಲಿ ಜು.10ರಂದು ನಡೆಯಿತು.
ಸುಳ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಯಾನಂದ ಕಲ್ನಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದಲ್ಲಿ ಪ್ರಧಾನ ಉಪನ್ಯಾಸ ನೀಡಲು ಆಗಮಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಮಾಹಿತಿಯ ಕೊರತೆಯಿಂದ, ಗ್ರಹಿಕೆಯ ಕೊರತೆಯಿಂದ ಸುದ್ದಿಗಳು ತಪ್ಪಾಗಿ ಪ್ರಕಟವಾಗದಂತೆ ಮಾಧ್ಯಮಗಳು ಜಾಗ್ರತೆ ವಹಿಸಬೇಕು. ಹೀಗಾದಲ್ಲಿ ಸಮಾಜದ ಸ್ವಾಸ್ಥ್ಯ ಕೆಡುವಂತಹ ಸನ್ನಿವೇಶ ಬಂದೊದಗಬಹುದು. ಸುದ್ದಿ ಪ್ರಕಟದ ವೇಳೆ ಈ ನಿಟ್ಟಿನಲ್ಲಿ ವರದಿಗಾರರು ಸಾಕಷ್ಟು ಮುಂಜಾಗ್ರತೆ ವಹಿಸಬೇಕು. ಅವಕಾಶ, ಅಧಿಕಾರ, ಸ್ವಾರ್ಥಕ್ಕೆ ಮಹತ್ವ ಕೊಡುವ ಜನರೇ ಸಮಾಜದಲ್ಲಿ ತುಂಬಿದರೂ ಸಮುದಾಯದ ನಡುವೆ, ಧರ್ಮಗಳ ನಡುವೆ ಪ್ರೀತಿ ಸ್ಪುರಿಸುವ ಕೆಲಸದಲ್ಲಿ ಪತ್ರಿಕೆಗಳು ತೊಡಗಬೇಕಾದ ಅನಿವಾರ್ಯತೆ ಇದೆ. ಸಮಾಜ ಹೇಗೆ ಇದೆ ಹಾಗೆ ಮಾಧ್ಯಮ ಕೂಡ ಇದೆ. ಸಮಾಜಕ್ಕೆ ಬೇಕಾದ ಸುದ್ದಿ ನೀಡಬೇಕು ಎಂದು ಹೇಳಿದರು.
ದ. ಕ. ಜಿಲ್ಲೆಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಿರಿಯ ಪತ್ರಕರ್ತ ಜೆ.ಕೆ. ರೈ ದಂಪತಿಯನ್ನು ಸನ್ಮಾನಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪತ್ರಿಕಾ ದಿನಾಚರಣೆ ಪ್ರಯುಕ್ತ ಪ್ರೌಢ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಪ್ರಬಂಧ ಹಾಗೂ ಭಾಷಣ ಸ್ಪರ್ಧಾ ವಿಜೇತರಿಗೆ ಇದೇ ವೇಳೆ ಬಹುಮಾನ ವಿತರಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಚಂದ್ರಶೇಖರ ಪೇರಾಲು, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ , ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಉಪಸ್ಥಿತರಿದ್ದರು.
ಹಿರಿಯ ಪತ್ರಕರ್ತ ಜಯಪ್ರಕಾಶ್ ಕುಕ್ಕೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಪ್ರಜ್ಞಾ ಎಸ್. ನಾರಾಯಣ ಅಚ್ರಪ್ಪಾಡಿ ಸ್ವಾಗತಿಸಿ, ಕಾರ್ಯದರ್ಶಿ ತೇಜೇಶ್ವರ ಕುಂದಲ್ಪಾಡಿ ವಂದಿಸಿ, ಚೈತ್ರಾ ಪ್ರಾರ್ಥಿಸಿ, ಗೌರವಾಧ್ಯಕ್ಷ ದಯಾನಂದ ಕೊರತ್ತೋಡಿ ಕಾರ್ಯಕ್ರಮ ನಿರೂಪಿಸಿದರು.