ಸಮಗ್ರ ನ್ಯೂಸ್: ಕಾಂಗ್ರೆಸ್ ಸಂಸದ, ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಆರೋಪಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಡಾ. ವೈ ಭರತ್ ಶೆಟ್ಟಿ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಪಾಲಿಕೆ ಸದಸ್ಯ ಕಾಂಗ್ರೆಸ್ನ ಅನಿಲ್ ಕುಮಾರ್ ನೀಡಿದ್ದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ. BNS 351(3), 353 ಸೆಕ್ಷನ್ ಅಡಿ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಧ್ಯೆ, ಭರತ್ ಶೆಟ್ಟಿ ಹೇಳಿಕೆ ಖಂಡಿಸಿ ಮಂಗಳೂರು ಪಾಲಿಕೆ ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆ ಮುಗಿದ ಬೆನ್ನಲ್ಲೇ ಏಕಾಏಕಿ ರಸ್ತೆಗೆ ನುಗ್ಗಿದ ಕಾರ್ಯಕರ್ತರು ರಸ್ತೆ ತಡೆ ಮಾಡಿದ್ದಾರೆ. ರಸ್ತೆ ತಡೆಯಿಂದ ಲಾಲ್ ಭಾಗ್ ಸರ್ಕಲ್ ಬಳಿ ಟ್ರಾಫಿಕ್ ಜಾಂ ಉಂಟಾಯಿತು. ಬಳಿಕ ರಸ್ತೆ ತಡೆ ನಡೆಸಿದ ನಾಯಕರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಪಕ್ಕಕ್ಕೆ ಸರಿಸಿದರು.
ಮಂಗಳೂರಿನ ಕಾವೂರಿನಲ್ಲಿ ಸೋಮವಾರ ನಡೆದಿದ್ದ ಬಿಜೆಪಿ ಪ್ರತಿಭಟನೆಯಲ್ಲಿ ಮಾತನಾಡಿದ್ದ ಭರತ್ ಶೆಟ್ಟಿ, ರಾಹುಲ್ ಗಾಂಧಿಗೆ ಪಾರ್ಲಿಮೆಂಟ್ ಒಳಗೆ ಹೋಗಿ ಕೆನ್ನೆಗೆ ಬಾರಿಸಬೇಕಿತ್ತು ಅನಿಸುತ್ತಿದೆ ಎಂದಿದ್ದರು. ರಾಹುಲ್ ಗಾಂಧಿ ಶಿವನ ಫೋಟೊ ಹಿಡಿದು ನಿಂತಿದ್ದ. ಈ ಹುಚ್ಚನಿಗೆ ಶಿವ ಮೂರನೇ ಕಣ್ಣು ಬಿಟ್ಟರೆ ಸುಟ್ಟು ಬೂದಿಯಾಗಬಹುದು ಅಂತ ಗೊತ್ತಿಲ್ಲ ಎಂದು ಭರತ್ ಶೆಟ್ಟಿ ಹೇಳಿದ್ದರು.