ಸಮಗ್ರ ನ್ಯೂಸ್: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ರೂಪಾಯಿ ಅಕ್ರಮ ವರ್ಗಾವಣೆ ಹಗರಣದ ಸಂಬಂಧ ವಿಶೇಷ ತನಿಖಾ ತಂಡ(ಎಸ್‌ಐಟಿ) ತನಿಖೆಯನ್ನು ಎದುರಿಸುತ್ತಿರುವ ಮಾಜಿ ಸಚಿವ ಹಾಗೂ ಬಳ್ಳಾರಿ ಗ್ರಾಮೀಣ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಂತರ ವಶಕ್ಕೆ ಪಡೆದಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ₹185 ಕೋಟಿಗಳಿಗೂ ಹೆಚ್ಚಿನ ಅವ್ಯವಹಾರದ ಹಿನ್ನೆಲೆಯಲ್ಲಿ, ನಾಗೇಂದ್ರ ಅವರ ಡಾಲರ್ಸ್ ಕಾಲೋನಿಯ ಮನೆ ಸೇರಿದಂತೆ, ಸಂಬಂಧಿಸಿದ ಆಸ್ತಿಗಳಿರುವ ಬಿಇಎಲ್ ರೋಡ್, ಮತ್ತಿಕೆರೆ ಹಾಗೂ ಮಲ್ಲೇಶ್ವರಂ ಸೇರಿದಂತೆ ನಾಲ್ಕು ಕಡೆ ಇಡಿ ದಾಳಿ ನಡೆಸಿತ್ತು.
ಬಹುಕೋಟಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಸಂಬಂಧ ಶಾಸಕ ನಾಗೇಂದ್ರ ಹಾಗೂ ಕಾಂಗ್ರೆಸ್ ಶಾಸಕ ಬಸವನಗೌಡ ದದ್ದಲ್ ಅವರ ನಿನ್ನೆಯ ಸುಧೀರ್ಘ ವಿಚಾರಣೆಯ ಬೆನ್ನಲ್ಲೇ ಇಡಿ ಅಧಿಕಾರಿಗಳು ಇಂದು ಮುಂಜಾನೆಯಿಂದ ಹಠಾತ್ ದಾಳಿ ನಡೆಸಿ ಶಾಸಕ ನಾಗೇಂದ್ರರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.