ಸಮಗ್ರ ನ್ಯೂಸ್: ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಪುಳಿಕ್ಕುಕ್ಕು ಎಂಬಲ್ಲಿ ಕುಮಾರಧಾರ ನದಿಯ ಮದ್ಯ ಭಾಗದ ಪೊದೆಯೊಂದರಲ್ಲಿ ಸಿಲುಕಿಕೊಂಡಿದ್ದು ಆಗ್ನಿ ಶಾಮಕ ದಳ ಮತ್ತು ಪೊಲೀಸರ ಕಾರ್ಯಾಚರಣೆಯಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ ಘಟನೆ ಜುಲೈ 8 ರ ಮುಂಜಾನೆ ನಡೆದಿದೆ.
ನಿರಂತರ ಮಳೆಗೆ ಕುಮಾರಧಾರ ನದಿ ತುಂಬಿ ಹರಿಯುತ್ತಿದ್ದು ಪುಳಿಕುಕ್ಕು ಸೇತುವೆ ಮತ್ತು ರೈಲು ಸೇತುವೆ ಮದ್ಯ ಭಾಗದಲ್ಲಿರುವ ಪೊದೆಯೊಂದರಲ್ಲಿ ಯುವಕನೋರ್ವ ಸಿಲುಕಿಕೊಂಡು ರಕ್ಷಣೆಗಾಗಿ ಕೂಗಾಡಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ರಾತ್ರಿಯಿಂದಲೇ ಕೂಗಾಡುವ ಧ್ವನಿ ಕೇಳುತ್ತಿತ್ತು ಎಂದು ಕೆಲವರು ಮಾಹಿತಿ ನೀಡಿದ್ದಾರೆ.
ಆತನ ಬ್ಯಾಗ್ ಸೇತುವೆ ಪಕ್ಕ ಪತ್ತೆಯಾಗಿದೆ ಎನ್ನಲಾಗುತ್ತಿದ್ದು ನದಿಯಿಂದ ಕೆಳಕ್ಕೆ ಹಾರಿದನೆ ಅಥವಾ ಇನ್ಯಾವುದಾದರೂ ಘಟನೆ ನಡೆಯಿತೆ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಸದ್ಯ ಯುವಕನನ್ನು ರಕ್ಷಣೆ ಮಾಡಿ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಯುವಕನ ವೈಯಕ್ತಿಕ ಮಾಹಿತಿಗಳು ತಿಳಿದುಬಂದಿಲ್ಲ.