ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಮರ್ಕಂಜದ ಅಳವುಪಾರೆ ಎಂಬಲ್ಲಿ ನಡೆಸಲಾಗುತ್ತಿರುವ ಗಣಿಗಾರಿಕೆಯಿಂದ ಸ್ಥಳೀಯರಿಗೆ ನೆಮ್ಮದಿ ಇಲ್ಲವಾಗಿದೆ. ಕೆರೆ, ಬೋರ್ ವೆಲ್ ಗಳು ಬತ್ತಿ ಹೋಗಿದ್ದು, ಶಾಲೆ, ದೇವಸ್ಥಾನಗಳು ಬಿರುಕು ಬಿಟ್ಟಿವೆ. ದೂರು ನೀಡಲು ಹೋದರೆ ಗ್ರಾಮಸ್ಥರ ಮೇಲೆಯೇ ಕೇಸು ಹಾಕಲಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮರ್ಕಂಜ ಗ್ರಾ.ಪಂ ನ ಗ್ರಾಮಸಭೆಯಲ್ಲಿ ನಡೆಯಿತು.
ಪಂಚಾಯತ್ ಅಧ್ಯಕ್ಷೆ ಗೀತಾ ಹೊಸೊಳಿಕೆ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆದವು. ಗ್ರಾಮದ ಅಳವುಪಾರೆ ಎಂಬಲ್ಲಿ ಗಣಿಗಾರಿಕೆ ಮತ್ತೆ ಆರಂಭವಾದ ಬಗ್ಗೆ ಮಾತನಾಡಿದ ನವೀನ್ ರವರು ಮರ್ಕಂಜದ ಗಣಿಗಾರಿಕೆ ಅವರಿಗೆ ಇದ್ದ ಅನುಮತಿಯಿಂದ ಹೆಚ್ಚುವರಿಯಾಗಿ ವಿಸ್ತರಿಸಿ ಬೇರೆ ಸರ್ವೆ ನಂಬರ್ ನಲ್ಲಿ ತೆಗೆಯುತ್ತಿದ್ದೀರಾ? ಎಂದು ಪ್ರಶ್ನಿಸಿದಾಗ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಹೆಚ್ಚುವರಿ ತೆಗೆದಿದ್ದಕ್ಕೆ ಒಮ್ಮೆ ದಂಡ ವಿಧಿಸಿದ್ದಾರೆ ಎಂದರು. ಆಗ ಚರಣ್ ರವರು ಮಾತನಾಡಿ ದಂಡ ಕಟ್ಟಿದರೆ ಕೋರೆ ಅನುಮತಿ ಇಲ್ಲದ ಸ್ಥಳದಲ್ಲಿ ಮುಂದುವರೆಸಬಹುದಾ? ಎಂದು ಪ್ರಶ್ನಿಸಿದರು.
ದೊಡ್ಡತೋಟ ಮರ್ಕಂಜ ರಸ್ತೆ ದುರಸ್ಥಿಯ ಬಗ್ಗೆ ಮತ್ತು ಚರಂಡಿ ದುರಸ್ಥಿ ಹಾಗೂ ರಸ್ತೆ ಬದಿ ಕಾಡು ಕಡಿಯುವ ಬಗ್ಗೆ ಸತೀಶ್ ರಾವ್ ದಾಸರಬೈಲು ಹೇಳಿದರು. ಈ ಬಗ್ಗೆ ಪಿಡಬ್ಲ್ಯುಡಿ ಇಲಾಖೆಗೆ ಮಾಹಿತಿ ನೀಡುವ ಬಗ್ಗೆ ಪಿಡಿಒ ಹೇಳಿದರು.
ಗ್ರಾಮಮಟ್ಟದಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಸುವಂತೆ ಗ್ರಾಮಸ್ಥರು ಆಗ್ರಹಿಸಿದರು. ಈ ಕುರಿತು ವಿವಿಧ ಇಲಾಖೆಗಳಿಗೆ ಹಾಗೂ ತಹಶಿಲ್ದಾರರಿಗೆ ಸಭೆ ನಡೆಸಲು ಮನವಿ ನೀಡುವುದಾಗಿ ನಿರ್ಣಯಿಸಲಾಯಿತು. ಗ್ರಾಮಸಭೆಯಲ್ಲಿ ನಡೆದ ಸಮಸ್ಯೆ ಕುರಿತ ಚರ್ಚೆಗಳಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ಗ್ರಾಮಸ್ಥರು ಆಗ್ರಹಿಸಿದರು.
ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಶೈಲಜ ನೋಡೆಲ್ ಅಧಿಕಾರಿಯಾಗಿದ್ದರು.
ಕಾರ್ಯದರ್ಶಿ ಪದ್ಮಾವತಿ ವರದಿ ಮಂಡಿಸಿದರು. ಪಿಡಿಒ ವಿದ್ಯಾಧರ ಕೆ.ಎಸ್. ಸ್ವಾಗತಿಸಿ, ನಿರೂಪಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಸಂಧ್ಯಾ, ಸದಸ್ಯರುಗಳಾದ ಚಿತ್ತರಂಜನ್ ಕಟ್ಟಕ್ಕೋಡಿ, ರಮತಾ ಕುದ್ಕುಳಿ, ಯಶವಂತ ಸೂಟೆಗದ್ದೆ, ರಾಜೇಂದ್ರ ಕೊಚ್ಚಿ, ಗೋವಿಂದ ಅಳವುಪಾರೆ, ನಾಗವೇಣಿ ಶೆಟ್ಟಿಮಜಲು, ಪವಿತ್ರ ಗುಂಡಿ ಉಪಸ್ಥಿತರಿದ್ದರು.