ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಬಂತೆಂದರೆ ಸಾಕು ಅತ್ಯದ್ಭುತ ಲೋಕವೇ ಸೃಷ್ಟಿಯಾಗುತ್ತದೆ. ಹತ್ತಾರು ಜಲಪಾತಗಳು ಮೈದುಂಬಿ ಧುಮ್ಮಿಕ್ಕುತ್ತವೆ. ನದಿ-ತೊರೆಗಳು ತುಂಬಿ ಹರಿಯುತ್ತವೆ. ಇಂತಹ ಆಹ್ಲಾದಕರ ವಾತಾವರಣದಲ್ಲಿ ಜಲಪಾತಗಳಿಗೆ ಇಳಿದು ಮೇಲಿನಿಂದ ಧುಮ್ಮಿಕ್ಕುವ ನೀರಿಗೆ ಮೈಯೊಡ್ಡಿ ಸ್ನಾನ ಮಾಡುವುದು ಅಂದರೆ ಎಲ್ಲರಿಗೂ ಖುಷಿ. ಹಾಗಾಗಿ ಜಿಲ್ಲೆಗೆ ಆಗಮಿಸುವ ಬಹುತೇಕ ಪ್ರವಾಸಿಗರು ಗ್ರಾಮೀಣ ಭಾಗದಲ್ಲಿರುವ ಜಲಪಾತಗಳಿಗೆ ಇಳಿದು ಎಂಜಾಯ್ ಮಾಡುತ್ತಾರೆ. ಆದ್ರೆ, ಇದೀಗ ಕೊಡಗು ಜಿಲ್ಲಾಡಳಿತ ಪ್ರವಾಸಿಗರ ಈ ಎಂಜಾಯ್ಮೆಂಟ್ಗೆ ತಣ್ಣೀರು ಹಾಕಿದೆ.
ಜಿಲ್ಲೆಯ ಯಾವುದೇ ಜಲಪಾತಗಳಿಗೆ ಇಳಿದು ಸ್ನಾನ ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಜಲಪಾತ ಮಾತ್ರವಲ್ಲ, ನದಿ-ತೊರೆಗಳು, ಝರಿಗಳು, ಸಾರ್ವಜನಿಕ ಕೆರೆಗಳಲ್ಲೂ ಸ್ನಾನ ಮಾಡುವುದನ್ನ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ವೆಂಕಟ್ ರಾಜಾ ಈ ಆದೇಶ ಹೊರಡಿಸಿದ್ದಾರೆ.
ದೇಶದ ವಿವಿಧೆಡೆ ಜಲಪಾತಗಳಲ್ಲಿ ಸ್ನಾನಕ್ಕೆ ಇಳಿದು ಜನರು ಜೀವ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶ ಮಾಡಲಾಗಿದೆ. ಇತ್ತ ಮಳೆಯಿಂದಾಗಿ ಚೇಲಾವರ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು, ಸುಮಾರು 50 ಅಡಿ ಎತ್ತರದಿಂದ ಹಾಲ್ನೋರೆಯಾಗಿ ಧುಮ್ಮಿಕ್ಕುವ ರಮಣೀಯ ದೃಷ್ಯ ಕಣ್ ತುಂಬಿಸಿಕೊಳ್ಳಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ ಜಿಲ್ಲಾಡಳಿತ ನಿರ್ಬಂಧ ಹೇರಿರುವ ಕಾರಣ ಯುವಜನತೆಗೆ ಬೇಸರ ಉಂಟಾಗಿದೆ.