ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಐವರ್ನಾಡು ಗ್ರಾಮಸಭೆಯ ಮೊದಲ ಹಂತದ ಗ್ರಾಮಸಭೆ ಜು.3ರಂದು ಗ್ರಾ.ಪಂ ಸಭಾಭವನದಲ್ಲಿ ನಡೆಯಿತು. ಸಭೆಯ ಉಸ್ತುವಾರಿಯನ್ನು ಯುವಜನ ಸೇವಾ ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ ವಹಿಸಿದ್ದರು. ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಲೀಲಾವತಿ ಕುತ್ಯಾಡಿ ವಹಿಸಿದ್ದರು.
ಸಭೆಯಲ್ಲಿ ರಸ್ತೆ, ವಿದ್ಯುತ್, ಮೂಲಸೌಕರ್ಯ ಕುರಿತು ಕಾವೇರಿದ ಚರ್ಚೆ ನಡೆಯಿತು. ಉದ್ಯೋಗ ಖಾತರಿ ಯೋಜನೆಯಲ್ಲಿ ವೈಯಕ್ತಿಕ ಕಾಮಗಾರಿ ಕ್ಷೇತ್ರ ವೀಕ್ಷಣೆ ವೇಳೆ ನಾಗರಿಕರ ಬಳಿ ಹಣ ಪಡೆದುಕೊಳ್ಳುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಆಡಳಿತಾತ್ಮಕ ವೆಚ್ಚದಲ್ಲಿ ಪೋಟೋ ಮುಂತಾದ ಖರ್ಚು ಭರಿಸುವುದನ್ನು ಬಿಟ್ಟು ಜನರ ಕೈಯಿಂದ ಹಣ ಪಡೆದುಕೊಳ್ಳಲಾಗುತ್ತಿದೆ ಎಂದು ಆರೋಪ ವ್ಯಕ್ತವಾಯಿತು.
ವಿದ್ಯುತ್ ಸಂಪರ್ಕಕ್ಕಾಗಿ ನಿರಕ್ಷೇಪಣಾ ಪತ್ರ ನೀಡುವಾಗ ನೀರಿನ ಮೂಲವಿಲ್ಲದ ಕೃಷಿಕರಿಗೆ ಇನ್ನೊಬ್ಬರ ಕೆರೆಯ ಬಳಿ ನಿಂತು ಫೋಟೋ ತೆಗೆದು ದೃಢಪತ್ರ ನೀಡಲಾಗಿದೆ ಎಂದು ಗ್ರಾಮಸ್ಥರು ಪಂಚಾಯತ್ ಸಿಬ್ಬಂದಿ ಮೇಲೆ ಆರೋಪಿಸಿದರು. ಇದಕ್ಕೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಗ್ರಾಮಸಭೆಯಲ್ಲಿ ತೀರ್ಮಾನಿಸಲಾಯಿತು. ಅಲ್ಲದೇ ಅಂತಹ ಫಲಾನುಭವಿಗೆ ನೋಟೀಸ್ ನೀಡುವುದೆಂದು ನಿರ್ಣಯಿಸಲಾಯಿತು.
ಐವರ್ನಾಡು ದೇವಸ್ಥಾನ ರಸ್ತೆಯನ್ನು ಚುನಾವಣೆ ಮೊದಲು ಅಗೆದು ಹಾಕಿದ್ದು, ಕಾಮಗಾರಿ ಮುಗಿದಿದ್ದು, . ಈ ಹಿಂದೆ ಕಾಮಗಾರಿ ಆರಂಭದಲ್ಲಿ ಯಾವ ಹಂತದಲ್ಲಿದೆ ಮತ್ತು ಇದಕ್ಕೆ ಬಿಡುಗಡೆಯಾದ ಅನುದಾನದ ವಿವರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದಾಗ ವಿವರ ನೀಡಿರದ ಪಿಡಿಒ ಶ್ಯಾಂಪ್ರಸಾದ್ ರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಅಲ್ಲದೇ ಗಂಗಾಕಲ್ಯಾಣ ಯೋಜನೆಯ ಅನುಷ್ಠಾನದ ಬಗ್ಗೆ ಪ.ಪಂಗಡದ ಫಲಾನುಭವಿಗಳನ್ನು ಸತಾಯಿಸಿರುವ ಕುರಿತು ಪಿಡಿಒ ಬಗ್ಗೆ ಆಕ್ರೋಶ ವ್ಯಕ್ತವಾಯಿತು.
ಗ್ರಾ.ಪಂ ವ್ಯಾಪ್ತಿಯ ಹಲವು ಭಾಗಗಳಲ್ಲಿ ಚುನಾವಣೆ ಪೂರ್ವದಲ್ಲಿ ಕಾಮಗಾರಿ, ಗುದ್ದಲಿ ಪೂಜೆ ಆರಂಭಿಸಿದ್ದು, ಇದೀಗ ನೆನೆಗುದಿಗೆ ಬಿದ್ದಿರುವ ಬಗ್ಗೆ ಆಕ್ರೋಶ ವ್ಯಕ್ತವಾಯಿತು. ಈ ಕುರಿತು ಪಂಚಾಯತ್ ಆಡಳಿತದ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸಿದರು. ಐವರ್ನಾಡು ಸಮೀಪದ ಶಾಲಾ ರಸ್ತೆಯ ಬದಿ ಹೊಳೆ ಇದ್ದು, ಇದಕ್ಕೆ ತಡೆಗೋಡೆ ನಿರ್ಮಿಸಲು ಮನವಿ ಮಾಡಿದರೂ ಕ್ರಮ ಕೈಗೊಳ್ಳದಿರುವ ಬಗ್ಗೆ ಚರ್ಚೆ ನಡೆಯಿತು.
ನೆಟ್ಟಾರು, ಪೆರ್ಲಂಪಾಡಿ ಮಾರ್ಗಗಳಲ್ಲಿ ಶಾಲಾ ಮಕ್ಕಳ ಅನುಕೂಲಕ್ಕಾಗಿ ಬಸ್ ಸಂಚಾರ ಆರಂಭಿಸುವುದು, ಗ್ರಾಮಗಳ ವಿವಿಧ ಜನವಸತಿ ಪ್ರದೇಶಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಲು ಅಶೋಕ್ ಎಡಮಲೆ ಮುಂದಾಳತ್ವದಲ್ಲಿ ಪಂಚಾಯತ್ ಗೆ ಮನವಿ ಸಲ್ಲಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ, ಸದಸ್ಯರು, ವಿವಿಧ ಇಲಾಖೆಗಳ ಪ್ರಮುಖರು, ಗ್ರಾಮಸ್ಥರು ಹಾಜರಿದ್ದರು.
ನೋಡೆಲ್ ಅಧಿಕಾರಿ ವಿರುದ್ದ ಕಿಡಿ:
ಗ್ರಾಮಸಭೆಯಲ್ಲಿ ಗ್ರಾಮಸ್ಥರಿಗೆ ಮಾತನಾಡಲು ಅವಕಾಶ ನೀಡದ ನೋಡೆಲ್ ಅಧಿಕಾರಿ ದೇವರಾಜ್ ಮುತ್ಲಾಜೆ ವಿರುದ್ದ ಗ್ರಾಮಸ್ಥರು ಕಿಡಿಕಾರಿದರು. ಹಿಂದಿನ ಸಭೆಯಲ್ಲೂ ಚರ್ಚೆ ಅಪೂರ್ಣವಾಗಿದ್ದು, ಈ ಸಭೆಯಲ್ಲೂ ಮಧ್ಯಪ್ರವೇಶಿಸಿ ಗ್ರಾಮಸ್ಥರನ್ನು ತಡೆದ ಬಗ್ಗೆ ಜನರು ಅವರನ್ನು ತರಾಟೆಗೆ ತೆಗೆದುಕೊಂಡರು.