ಸಮಗ್ರ ನ್ಯೂಸ್: ಮಂಗಳೂರು ನಗರದ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದ ತಳಪಾಯಕ್ಕೆ ತೆಗೆದ ಗುಂಡಿಯ ಪಕ್ಕದ ಮಣ್ಣು ಬುಧವಾರ ಮಧ್ಯಾಹ್ನ ಕುಸಿದು, ಕಾರ್ಮಿಕರಿಬ್ಬರು ಅದರಡಿ ಸಿಲುಕಿದ್ದರು. ಅವರಲ್ಲಿ ಒಬ್ಬ ಕಾರ್ಮಿಕನನ್ನು ರಕ್ಷಿಸಲಾಗಿದೆ.
ಇನ್ನೊಬ್ಬನ ರಕ್ಷಣಾ ಕಾರ್ಯಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಏಳು ಗಂಟೆಗಳ ಪ್ರಯತ್ನದ ಬಳಿಕ ಇನ್ನೊಬ್ಬ ಕಾರ್ಮಿಕನ ದೇಹವನ್ನು ಮಣ್ಣಿನಡಿಯಿಂದ ರಾತ್ರಿ 7.30ರ ಸುಮಾರಿಗೆ ಹೊರತೆಗೆಯಲಾಯಿತು.
ಬಿಹಾರದ ರೋಹ್ಟಾಸ್ ಜಿಲ್ಲೆಯ ಅಕ್ಹೊರಾ ಗ್ರಾಮದ ಧವನಿಯಾದ ರಾಜ್ ಕುಮಾರ್ (18) ರಕ್ಷಣೆಗೊಳಗಾದ ಕಾರ್ಮಿಕ. ಆತನ ಜೊತೆ ಕೆಲಸ ಮಾಡುತ್ತಿದ್ದ ಚಂದನ್ ಕುಮಾರ್ (30) ದೇಹ ಪ್ರಜ್ಞಾಹೀನ ಸ್ಥಿತಿಯಲ್ಲಿತ್ತು. ಎದೆ ಬಡಿತ ಕ್ಷೀಣಿಸಿತ್ತು. ದೇಹವನ್ನು ಮಣ್ಣಿನಿಂದ ಹೊರ ತೆಗೆದ ತಕ್ಷಣವೇ ತಜ್ಞ ವೈದ್ಯರ ತಂಡ ಎದೆಬಡಿತ ಮರುಸ್ಥಾಪನೆಗೆ ಪ್ರಯತ್ನಿಸಿದೆ. ಅದಾಗ್ಯೂ ಚಿಕಿತ್ಸೆ ಫಲಿಸದೆ ಚಂದನ್ ಸಾವನ್ನಪ್ಪಿದ್ದಾನೆ.
ಘಟನೆ ಬಳಿಕ ಎಚ್ಚೆತ್ತುಕೊಂಡ ಮಹಾನಗರ ಪಾಲಿಕೆ ಮಂಗಳೂರು ನಗರದಾದ್ಯಂತ ನಿರ್ಮಾಣ ಹಂತದ ಕಾಮಗಾರಿ ನಿಷೇಧಿಸಿ ಆದೇಶ ಹೊರಡಿಸಿದೆ. ಮಳೆಗಾಲ ಮುಗಿಯುವವರೆಗೆ ಅಂದರೆ ಮುಂದಿನ ಮೂರು ತಿಂಗಳು ನಗರದಲ್ಲಿ ಕಟ್ಟಡ ಕಾಮಗಾರಿ ನಡೆಸದಂತೆ ಪಾಲಿಕೆ ಆಯುಕ್ತರು ಆದೇಶಿಸಿದ್ದಾರೆ.