ಸಮಗ್ರ ನ್ಯೂಸ್: ಹೊಂಡ ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಪರದಾಡುತ್ತಿರುವುದನ್ನು ಮನಗಂಡು ಪೊಲೀಸ್ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಹಾರೆ ಹಿಡಿದು ರಸ್ತೆಗಿಳಿದು ರಸ್ತೆ ಗುಂಡಿಗಳನ್ನು ಮುಚ್ಚಿದ ಘಟನೆ ಮಂಗಳೂರು ನಗರದ ಕೆಪಿಟಿಯಲ್ಲಿ ನಡೆದಿದೆ.
ಕೆಪಿಟಿಯಲ್ಲಿನ ಹೆದ್ದಾರಿ ಸಂಪೂರ್ಣವಾಗಿ ರಸ್ತೆ ಗುಂಡಿಗಳಿಂದ ಕೂಡಿತ್ತು. ಇದರ ಪರಿಣಾಮವಾಗಿ ವಾಹನ ಸವಾರರು ಈ ಹೆದ್ದಾರಿಯಲ್ಲಿ ಸಂಚರಿಸಲು ತೊಂದರೆ ಅನುಭವಿಸುತ್ತಿದ್ದರು. ಅನೇಕ ಸಲ ಅಪಘಾತಗಳ ನಡೆಯುವುದು ಸ್ವಲ್ಪದರಲ್ಲಿಯೇ ತಪ್ಪಿದ್ದು ಇದನ್ನು ಮನಗಂಡ ಕದ್ರಿ ಸಂಚಾರಿ ಠಾಣಾ ಸಬ್ ಇನ್‌ಸ್ಪೆಕ್ಟರ್ ಈಶ್ವರ ಸ್ವಾಮಿಯವರು ತಮ್ಮ ಸಿಬ್ಬಂದಿ ಸಹಾಯದಿಂದ ಕಾಂಕ್ರೀಟ್ ಅಳವಡಿಸಿ, ರಸ್ತೆ ಗುಂಡಿಗಳನ್ನು ಮುಚ್ಚಿದ್ದರು. ಅವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಶ್ಲಾಘನೆ ವ್ಯಕ್ತವಾಗಿದೆ.
ಸ್ಥಳೀಯ ಆಡಳಿತ ಮಾಡದೇ ಇರುವ ಕೆಲಸವನ್ನು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಮಾಡಿ ತೋರಿಸಿದೆ. ಇದು ಪೊಲೀಸರಿಗೆ ಇರುವ ಸಾರ್ವಜನಿಕ ಕಾಳಜಿಯಾಗಿದೆ ಎಂದು ಸ್ಥಳೀಯರು ಮೆಚ್ಚುಗೆ ಸೂಚಿಸಿದ್ದು, ಅವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.