ಸಮಗ್ರ ನ್ಯೂಸ್: ಭಾನುವಾರದ ರಜಾ ದಿನವನ್ನು ಪ್ರವಾಸಿ ತಾಣದಲ್ಲಿ ಕಳೆಯಲು ಹೋದ ಕುಟುಂಬ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಮಹಾರಾಷ್ಟ್ರದ ಲೋನವಾಲದಲ್ಲಿ ನಡೆದಿದೆ. ಭುಶಿ ಡ್ಯಾಮ್ ಪಕ್ಕದ ಪ್ರಸಿದ್ದ ಪ್ರವಾಸಿ ತಾಣದಲ್ಲಿ ಜಲಪಾತ ಸೇರಿದಂತೆ ಪ್ರಕೃತಿ ಸೌಂದರ್ಯದಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ.
ಮಹಿಳೆ ತನ್ನ ನಾಲ್ವರು ಮಕ್ಕಳನ್ನು ಕರೆದುಕೊಂಡು ಇದೇ ಪ್ರದೇಶಕ್ಕೆ ತೆರಳಿದ್ದಾರೆ. ಆದರೆ ಏಕಾಏಕಿ ಡ್ಯಾಮ್ ನೀರು ತುಂಬಿ ಹರಿದಿದೆ. ಇದರ ಪರಿಣಾಮ ಮಹಿಳ ಸೇರಿದಂತೆ ನಾಲ್ವರು ಮಕ್ಕಳು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಈ ಪೈಕಿ ಮಹಿಳೆ ಹಾಗೂ ಇಬ್ಬರ ಮಕ್ಕಳ ಮೃತದೇಹ ಪತ್ತೆಯಾಗಿದ್ದು, ಇನ್ನಿಬ್ಬರ ಮಕ್ಕಳ ಮೃತದೇಹಕ್ಕೆ ಶೋಧ ಕಾರ್ಯ ಮುಂದುವರಿದಿದೆ.
ಲೋನವಾಲದ ಭುಶಿ ಡ್ಯಾಮ್ ಪಕ್ಕದ ಪ್ರವಾಸಿ ತಾಣದಲ್ಲಿ ಭಾರಿ ಜನಸಾಗರವೇ ಸೇರಿತ್ತು. 36 ವರ್ಷದ ಮಹಿಳೆ ತನ್ನ ನಾಲ್ವರು ಮಕ್ಕಳನ್ನು ಕರೆದುಕೊಂಡು ಇದೇ ಪ್ರವಾಸಿ ತಾಣಕ್ಕೆ ತೆರಳಿದ್ದಾರೆ. ಎಲ್ಲರಂತೆ ಮಹಿಳೆ ಹಾಗೂ ಮಕ್ಕಳು ಡ್ಯಾಮ್ ನೀರಿನಿಂದ ಕೆಲಭಾಗದಲ್ಲಿ ಸೃಷ್ಟಿಯಾಗುವ ಜಲಪಾತ ವೀಕ್ಷಿಸುತ್ತಾ, ನೀರಿನಲ್ಲಿ ಆಟವಾಡುತ್ತಾ ಕಾಲ ಕಳೆದಿದ್ದಾರೆ. ಆದರೆ ಮಹಾರಾಷ್ಟ್ರ ಪಶ್ಚಿಮ ಘಟ್ಟಗಳಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಡ್ಯಾಮ್‌ಗೆ ಏಕಾಏಕಿ ನೀರು ಹರಿದು ಬಂದಿದೆ.
ನೀರಿನಲ್ಲಿ ಆಟವಾಡುತ್ತಿದ್ದ ಮಹಿಳೆ ಸೇರಿ ನಾಲ್ವರು ಮಕ್ಕಳು ಪ್ರಾಣ ಉಳಿಸಲು ಸತತವಾಗಿ ಹೋರಾಡಿದ್ದಾರೆ. ಸಹಾಯಕ್ಕಾಗಿ ಕಿರುಚಾಡಿದ್ದಾರೆ. ಆದರೆ ದಡದಲ್ಲಿದ್ದವರು ಏನೂ ಮಾಡಲಾಗದ ಪರಿಸ್ಥಿತಿ. ನೀರಿನ ರಭಸ ಹೆಚ್ಚಾಗುತ್ತಿದ್ದಂತೆ ಮಹಿಳೆ ಸೇರಿ ನಾಲ್ವರು ಮಕ್ಕಳು ಕೊಚ್ಚಿ ಹೋಗಿದ್ದಾರೆ. ಕೊನೆಯ ಕ್ಷಣದ ವಿಡಿಯೋ ಸೆರೆಯಾಗಿದೆ.
ಈ ಪೈಕಿ ಮಹಿಳೆ, 13 ವರ್ಷ ಹಾಗೂ 8 ವರ್ಷದ ಇಬ್ಬರು ಹೆಣ್ಣುಮಕ್ಕಳ ಮೃತದೇಹ ಪತ್ತೆಯಾಗಿದೆ. ಆದರೆ 9 ವರ್ಷದ ಬಾಲಕ ಹಾಗೂ 4 ವರ್ಷಗದ ಹೆಣ್ಣು ಮಗು ಪತ್ತೆಯಾಗಿಲ್ಲ. ಘಟನೆ ನಡೆದ ಮಾಹಿತಿ ಸಿಕ್ಕ ಬೆನ್ನಲ್ಲೇ ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ನಡೆಸಿದೆ. ಮೂವರ ಮೃತದೇಹ ಪತ್ತೆಹಚ್ಚಲಾಗಿದೆ. ಸೋಮವಾರ(ಜು. ೧) ಮತ್ತೆ ಶೋಧ ಕಾರ್ಯ ಮುಂದುವರಿಯುತ್ತಿದೆ.