ಸಮಗ್ರ ನ್ಯೂಸ್: ತಂದೆಯ ನಿಧನ ಹಿನ್ನೆಲೆಯಲ್ಲಿ ಊರಿಗೆ ಬರಲು ಯತ್ನಿಸಿದ ಯುವಕನಿಗೆ ರಜೆ ಕೊಡದೆ, ಪಾಸ್ ಪೋರ್ಟ್ ತೆಗೆದಿಟ್ಟು ಸತಾಯಿಸಿದ ವಿಷಯ ತಿಳಿದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ವಿದೇಶಾಂಗ ಇಲಾಖೆ ಮತ್ತು ಮಾಲ್ಡೀವ್ಸ್ ಎಂಬಸ್ಸಿ ಯನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಿದ ಘಟನೆ ನಡೆದಿದೆ.
ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಗುರುಪ್ರಸಾದ್ ಗೋಳ್ಯಾಡಿ ಜೂ. 20ರಂದು ನಿಧನರಾಗಿದ್ದರು. ಇವರ ಮಗ ತ್ರಿಶೂಲ್ ಎರಡು ವರ್ಷಗಳಿಂದ ಮಾಲ್ಡೀವ್ಸ್ ನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸಕ್ಕಿದ್ದು ತಂದೆಯ ನಿಧನ ವಿಷಯ ತಿಳಿದು ಊರಿಗೆ ಬರಲು ಪ್ರಯತ್ನ ಮಾಡಿದ್ದರು. ಆದರೆ, ಅವಧಿ ಪೂರ್ತಿಗೊಳ್ಳದ ಕಾರಣ ಕಂಪನಿಯವರು ರಜೆಯನ್ನೂ ಕೊಡದೆ ಕೆಲಸ ಬಿಟ್ಟು ಹೋಗದಂತೆ ಪಾಸ್ ಪೋರ್ಟ್ ತೆಗೆದಿಟ್ಟಿದ್ದರು.
ಇತ್ತ ಏಕೈಕ ಮಗ ವಿದೇಶದಿಂದ ಬರುತ್ತಾನೆಂದು ಜೂನ್. 24ರವರೆಗೂ ಮೃತ ದೇಹವನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ಕಾಪಿಟ್ಟು ಕಾದಿದ್ದರು. ಕೊನೆಗೆ, ತ್ರಿಶೂಲ್ ತನಗೆ ಬರಲಾಗುವುದಿಲ್ಲ, ನೀವು ಅಂತ್ಯಕ್ರಿಯೆ ಪೂರ್ತಿಗೊಳಿಸಿ ಎಂದು ಹೇಳಿದ ಕಾರಣ ಮರಣ ಹೊಂದಿದ ನಾಲ್ಕು ದಿನಗಳ ಬಳಿಕ ಅಂತ್ಯಕ್ರಿಯೆ ನೆರವೇರಿಸಿದ್ದರು.
ಜೂನ್ 24ರಂದು ಸಂಸದ ಬ್ರಿಜೇಶ್ ಚೌಟ ಪ್ರಮಾಣ ವಚನಕ್ಕಾಗಿ ದೆಹಲಿಗೆ ಹೋಗಿದ್ದಾಗ ಗುರುಪ್ರಸಾದ್ ಅವರ ಹತ್ತಿರದ ಸಂಬಂಧಿ ಬೆಳ್ತಂಗಡಿ ತಾಲೂಕಿನ ಪದ್ಮುಂಜ ಗ್ರಾಮದ ನಿವೃತ್ತ ಉಪನ್ಯಾಸಕ ರುಕ್ಮಯ್ಯ ಗೌಡ ನೇರವಾಗಿ ಸಂಸದರಿಗೆ ಫೋನ್ ಕರೆ ಮಾಡಿ ತ್ರಿಶೂಲ್ ನನ್ನು ಕರೆತರಲು ಸಹಾಯ ಮಾಡುವಂತೆ ಕೇಳಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ಸಂಸದರು, ವಿದೇಶಾಂಗ ಇಲಾಖೆ ಮತ್ತು ಮಾಲ್ಡೀವ್ಸ್ ಹೈಕಮಿಷನ್ ಗೆ ನೇರವಾಗಿ ಇಮೇಲ್ ಮೂಲಕ ಸಂದೇಶ ಕಳುಹಿಸಿದ್ದರು. ಸಂಸದರ ಮನವಿಗೆ ಮಾಲ್ಡೀವ್ಸ್ ಭಾರತೀಯ ರಾಯಭಾರ ಕಚೇರಿ ಪ್ರತಿಕ್ರಿಯಿಸಿ ಯುವಕನ ಬಿಡುಗಡೆಗೆ ಪ್ರಯತ್ನಿಸುವ ಭರವಸೆ ಲಭಿಸಿತ್ತು.
ರಾಯಭಾರ ಕಚೇರಿಯ ಸೂಚನೆಯಂತೆ, ಖಾಸಗಿ ಕಂಪನಿ ಯುವಕನಿಗೆ ರಜೆ ಕೊಟ್ಟಿದ್ದಲ್ಲದೆ, ವೇತನ ಸಹಿತ ಊರಿಗೆ ಕಳುಹಿಸಿಕೊಟ್ಟಿದ್ದಾರೆ. ಇದೀಗ ತ್ರಿಶೂಲ್ ಮನೆಗೆ ತಲುಪಿದ್ದು, ಕರೆ ಮಾಡಿದಾಗ ಸ್ಪಂದಿಸಿ ಉಪಕಾರ ಮಾಡಿದ ಸಂಸದರನ್ನು ಯಾವತ್ತೂ ಮರೆಯುವುದಿಲ್ಲ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.