ಸಮಗ್ರ ನ್ಯೂಸ್: ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿ ಮಳೆಯ ಅಬ್ಬರ ಜೋರಾಗಿದೆ. ಭಾರೀ ಮಳೆಗೆ ಜೀವಗಳು ಅಪಾಯದಲ್ಲಿ ಸಿಲುಕುತ್ತಿದ್ದು ಜನರು ತತ್ತರಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಅನಾಹುತಗಳಿಂದ ಎರಡೇ ದಿನಗಳಲ್ಲಿ 7 ಮಂದಿ ಮೃತಪಟ್ಟಿದ್ದಾರೆ.
ಉಳ್ಳಾಲ ತಾಲೂಕಿನ ಕುತ್ತಾರುವಿನ ಮದನಿನಗರದಲ್ಲಿ ಮನೆ ಕುಸಿದು ನಾಲ್ವರು ಮೃತಪಟ್ಟಿದ್ದರೆ, ಮಂಗಳೂರು ನಗರದ ರೋಸಾರಿಯೊ ಶಾಲೆ ಹಿಂಭಾಗದಲ್ಲಿ ಮಳೆಯಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಇಬ್ಬರು ಆಟೋ ಚಾಲಕರು ಸಾವನ್ನಪ್ಪಿದ್ದಾರೆ. ಗುರುವಾರ ಸಂಜೆ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದಲ್ಲಿ ಮಳೆ ನೀರಿನಲ್ಲಿ ವಿದ್ಯುತ್ ಪ್ರವಹಿಸಿ 20 ವರ್ಷದ ಯುವತಿ ಪ್ರತೀಕ್ಷಾ ಶೆಟ್ಟಿ ಅಸುನೀಗಿದ್ದಾಳೆ.
ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪ.ಪೂರ್ವ ಕಾಲೇಜುಗಳಿಗೆ ಶುಕ್ರವಾರ(ಜೂ.28) ಕೂಡಾ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶಿಸಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹಿರ್ಗಾನದಲ್ಲಿ ಭಾರಿ ಮಳೆಗೆ ನೆಲ ಶಕ್ತಿ ಕಳೆದುಕೊಂಡಿದೆ. ಮನೆಯ ಆವರಣದಲ್ಲಿದ್ದ ಬಾವಿ ಕಣ್ಣೆದುರಿಗೇ ಕುಸಿದು ಹೋಗಿದೆ. ಬಾವಿ ಕುಸಿಯುವ ದೃಶ್ಯ ಮೊಬೈಲ್ ಫೋನ್‌ನಲ್ಲಿ ಸೆರೆಯಾಗಿದೆ.
ವಿಶ್ವವಿಖ್ಯಾತ ಜೋಗ ಜಲಪಾತ ಭೋರ್ಗರೆದು ಧುಮ್ಮಿಕ್ಕುತ್ತಿದೆ. ಶಿವಮೊಗ್ಗ ಸುತ್ತಮುತ್ತಲೂ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜೋಗ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ. ಇನ್ನು, ತೀರ್ಥಹಳ್ಳಿ ಭಾಗದಲ್ಲಿ ವರ್ಷಧಾರೆಯಿಂದಾಗಿ ಆಗುಂಬೆ ಘಾಟ್‌ನಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ ಮಾಡಲಾಗಿದೆ. ಆಗುಂಬೆಯಲ್ಲಿ ಭೂಕುಸಿತ ಭೀತಿ ಇರುವುದರಿಂದ ಸೆಪ್ಟೆಂಬರ್ 15ರವರೆಗೆ ವಾಹನ ಸಂಚಾರ ಬಂದ್ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಇಬ್ಬರು ಪವಾಡ ಸದೃಶ ರೀತಿಯಲ್ಲಿ ಬಚಾವ್ ಆಗಿದ್ದಾರೆ.
ಘಟ್ಟಪ್ರದೇಶದಲ್ಲಿನ ಮಳೆಗೆ ಕುಮಾಧಾರಾ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ಕುಕ್ಕೆ ಸುಬ್ರಹ್ಮಣ್ಯ ಬಳಿ ಸ್ನಾನಘಟ್ಟ, ಕಿಂಡಿ ಆಣೆಕಟ್ಟು ಸಂಪೂರ್ಣ ಮುಳುಗಡೆ ಆಗಿದೆ. ನೇತ್ರಾವತಿ ನದಿ ಕೂಡಾ ಮೈದುಂಬಿ ಹರಿಯುತ್ತಿದೆ. ಕಾವೇರಿ ನದಿ ಉಕ್ಕಿ ಹರೀತಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತವಾಗಿದೆ. ಪವಿತ್ರ ಸ್ನಾನಘಟ್ಟ ಮುಳುಗಿ, ಮುಖ್ಯ ದ್ವಾರದವೆರಗೂ ನೀರು ತಲುಪಿದೆ. ಭಕ್ತರು ಪುಣ್ಯ ಸ್ನಾನ ಮಾಡಲಾಗದೆ ಪರದಾಡ್ತಿದ್ದಾರೆ. ಪಿಂಡ ಪ್ರಧಾನಕ್ಕೂ ತೊಂದರೆ ಉಂಟಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಬಳಿ ಭದ್ರಾನದಿ ಮೈತುಂಬಿದೆ. ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗಡೆಗೆ 4-5 ಅಡಿಯಷ್ಟೇ ಬಾಕಿ ಇದೆ.
ರಾಜ್ಯದಲ್ಲಿ ಇನ್ನೂ 4 ದಿನ ಮಳೆಯಾಟ ಮುಂದುವರೆಯಲಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.