ಸಮಗ್ರ ನ್ಯೂಸ್: ಕರಾವಳಿ, ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜೂನ್ 27ರಿಂದ ಸೆಪ್ಟೆಂಬರ್ 15ರವರೆಗೆ ಆಗುಂಬೆ ಘಾಟಿ ರಸ್ತೆಗಳಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಬದಲಿ ಮಾರ್ಗಗಳನ್ನೂ ಗುರುತಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಆದೇಶ ಹೊರಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರವಾಸಿಗರ ಸಂಖ್ಯೆ, ವಾಹನಗಳ ಓಡಾಟ ಜಾಸ್ತಿಯಾಗಿದೆ. ಇದರ ಮಧ್ಯೆ, ಭಾರಿ ಗಾತ್ರದ ವಾಹನಗಳ ಓಡಾಟವೂ ಮುಂದುವರಿದರೆ ಭೂಕುಸಿತ ಉಂಟಾಗುವ ಸಾಧ್ಯತೆಗಳು ಜಾಸ್ತಿ ಇರುತ್ತವೆ. ಹಾಗಾಗಿ, ಸೆಪ್ಟೆಂಬರ್ 15ರವರೆಗೆ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ತಿಳಿದುಬಂದಿದೆ. ತೀರ್ಥಹಳ್ಳಿ- ಉಡುಪಿ ಮಾರ್ಗದಲ್ಲಿ ಸಂಚರಿಸುವ ಭಾರಿ ವಾಹನಗಳಿಗೆ ಬದಲಿ ಮಾರ್ಗವನ್ನು ಸೂಚಿಸಲಾಗಿದೆ. ತೀರ್ಥಹಳ್ಳಿ–ಮಾಸ್ತಿಕಟ್ಟೆ– ಸಿದ್ದಾಪುರ– ಕುಂದಾಪುರ- ಉಡುಪಿ ಮಾರ್ಗವಾಗಿ ಭಾರಿ ವಾಹನಗಳು ಸಂಚರಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.