ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಆಟೋ ಮೀಟರ್ ದರ ಹೆಚ್ಚಿಸುವಂತೆ ಬೆಂಗಳೂರು ಆಟೋ ಚಾಲಕರ ಸಂಘ ಒತ್ತಾಯ ಮಾಡಿದೆ. ಆಟೋ ಚಾಲಕರ ಸಂಘ ಇತ್ತೀಚೆಗೆ ಬೆಂಗಳೂರು ನಗರ ಜಿಲ್ಲಾ ಉಪ ಆಯುಕ್ತರಿಗೆ ಪತ್ರ ಬರೆದು, ಬೆಂಗಳೂರಿನಲ್ಲಿ ಆಟೋ ರಿಕ್ಷಾ ದರವನ್ನು ಸಗಟು ಬೆಲೆ ಸೂಚ್ಯಂಕಕ್ಕೆ ಅನುಗುಣವಾಗಿ ಪರಿಷ್ಕರಿಸಲು ಕೋರಿದೆ. ಬೆಂಗಳೂರು ನಗರದಲ್ಲಿ ಆಟೋ ಮೀಟರ್ ದರ ಏರಿಕೆ ಮಾಡುವ ಅಧಿಕಾರ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಮಿಟಿಗೆ ಮಾತ್ರ ಅವಕಾಶ ಇರುವುದರಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುತ್ತಿದೆ.
ಬೆಂಗಳೂರು ನಗರದಲ್ಲಿ ಆಟೋದರ ಪರಿಷ್ಕರಣೆಯನ್ನು 2021ರ ಡಿಸೆಂಬರ್ 20ರಂದು ಮಾಡಲಾಗಿದೆ. ನಂತರ ಪರಿಷ್ಕರಣೆ ಮಾಡಿಲ್ಲ. ನಗರದಲ್ಲಿ ಆರಂಭದ 2 ಕಿ.ಮೀ.ಗೆ 30 ರೂ. ನಂತರ ಪ್ರತಿ ಹೆಚ್ಚುವರಿ ಕಿ.ಮೀ. 15 ರೂ ದರ ನಿಗದಿಯಾಗಿದೆ. ಈ ದರ 3 ವರ್ಷಗಳ ಹಿಂದೆ ಪರಿಷ್ಕರಿಸಲಾಗಿತ್ತು. ಈಗ ಮತ್ತೆ 5 ರಿಂದ 10 ರುಪಾಯಿ ಪರಿಷ್ಕರಿಸಲು ಮನವಿ ಮಾಡಲಾಗಿದೆ. ಸದ್ಯ ಬೆಂಗಳೂರು ನಗರದಲ್ಲಿ ಕನಿಷ್ಠ 30 ರುಪಾಯಿ ಇದ್ದು, ಅದನ್ನು 40 ರುಪಾಯಿ ಮಾಡಬೇಕೆಂದು ಮನವಿ ಮಾಡಲಾಗಿದೆ.
ಇತ್ತ ಪೆಟ್ರೋಲ್, ಡಿಸೇಲ್, ಹಾಲಿನ ದರ ಏರಿಕೆ ಬೆನ್ನಲ್ಲೇ ಇದೀಗ ಬೆಂಗಳೂರು ಆಟೋ ಬೆಲೆ ಏರಿಕೆಯು ಜನಸಾಮಾನ್ಯರಿಗೆ ಹೊಡೆತ ಬೀಳುವ ಸಾಧ್ಯತೆ ಇದೆ.