ಸಮಗ್ರ ನ್ಯೂಸ್: ದೈವಗಳ ನೆಲೆವೀಡು ಕರಾವಳಿ ಒಂದಲ್ಲ ಒಂದು ದೈವ ಕಾರ್ಣಿಕಕ್ಕೆ ಸಾಕ್ಷಿಯಾಗುತ್ತಾ ಇರುತ್ತದೆ. ಇದೀಗ ಇಂತಹದ್ದೇ ಮತ್ತೊಂದು ಘಟನೆ ನಡೆದಿದ್ದು, ದೈವ ಮುನಿಸಿಕೊಂಡ ಪರಿಣಾಮ ಒಂದಲ್ಲ ಒಂದು ಅವಾಂತರಗಳು ಸಂಭವಿಸುತ್ತಿದೆ ಎಂದು ಜನ ಆತಂಕಕ್ಕೀಡಾಗಿದ್ದಾರೆ
ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳು ನಡೆಯುತ್ತಿದೆ. ಆದರೆ ಮಂಗಳೂರಿನ ಹಳೆ ಬಸ್ ನಿಲ್ದಾಣದ ಬಳಿ ಮೂರು ವರ್ಷದಿಂದ ಕಾಮಗಾರಿಯೊಂದು ನೆನೆಗುದಿಗೆ ಬಿದ್ದಿದೆ. ಇದಕ್ಕೆ ಕಾರಣ ಗುಳಿಗೆ ದೈವದ ಮುನಿಸಂತೆ!!
ಬಹು ಅಂತಸ್ಥಿನ ಕಾರ್ ಪಾರ್ಕಿಂಗ್ ಕಾಮಗಾರಿಯ ಈಗಿನ ಈ ಸ್ಥಿತಿಗೆ ಕಾರಣ ಇಲ್ಲೇ ಸಮೀಪದಲ್ಲಿ ಇರುವ ಶರವು ಮಹಾ ಗುಳಿಗ ಅನ್ನೋದು ಸದ್ಯ ಚರ್ಚೆ ವಿಷಯ.
ಇತ್ತೀಚೆಗೆ ಶರವು ಮಹಾಗುಳಿಗನಿಗೆ ನೀಡಲಾದ ಕೋಲದಲ್ಲಿ ಗುಳಿಗ ಇದೇ ಕಾಮಾಗಾರಿ ವಿಚಾರವಾಗಿ ತನ್ನ ಕೋಪವನ್ನು ಹೊರಹಾಕಿದೆಯಂತೆ. ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಾತನ ನಿರ್ಲಕ್ಷ್ಯದ ಬಗ್ಗೆ ಶರವು ಮಹಾ ಗುಳಿಗ ಕೋಪದಿಂದಲೋ ಮುಂದೆ ದೊಡ್ಡ ಅನಾಹುತ ನಡೆಯಲಿದೆ ಎಂದು ಎಚ್ಚರಿಸಿದೆಯಂತೆ.
ಕಾಮಗಾರಿ ಆರಂಭಿಸುವ ಮೊದಲೇ ಇಲ್ಲಿನ ಗುಳಿಗನಿಗೆ ಪೂಜೆ ಸಲ್ಲಿಸಿದ ತಿಂಗಳ ಸಂಕ್ರಮಣದಂದು ಅಗೇಲು ನೀಡಲು ಇವರಿಗೆ ಸಲಹೆ ನೀಡಲಾಗಿತ್ತು. ಆದರೆ ದೈವದ ಬಗ್ಗೆ ನಿರ್ಲಕ್ಷ್ಯ ತೋರಿದ ಗುತ್ತಿಗೆದಾರ ದೈವಕ್ಕೆ ಕೊಡಬೇಕಾಗಿದ್ದು ಸೇವೆ ಕೊಡಲಿಲ್ಲ ಎಂಬುದು ಒಂದೆಡೆಯಾದರೆ ಕನಿಷ್ಟಪಕ್ಷ ದೈವಕ್ಕೆ ಕೈಮುಗಿದು ಕೆಲಸ ಆರಂಭಿಸಿಲ್ಲ. ಇದೇ ಕಾರಣದಿಂದ ಇದೀಗ ಆತನಿಗೆ ಅನಾರೋಗ್ಯ ಕೂಡ ಕಾಡಿದೆ ಎನ್ನುವ ವಿಚಾರ ಕೂಡಾ ಚರ್ಚೆಯಲ್ಲಿದೆ. ಇನ್ನೂ ಆತನ ಬದಲಿಗೆ ಗುಳಿಗನ ಕೋಲಕ್ಕೆ ಬಂದ ಆತನ ಮ್ಯಾನೇಜರ್‌ಗೆ ದೈವ ಆತನನ್ನೇ ಕರೆದುಕೊಂಡು ಬಾ ಎಂದು ಹೇಳಿ ಎಚ್ಚರಿಕೆ ನೀಡಿದೆ ಎಂದು ಸ್ಥಳೀಯರು ಹಾಗೂ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಒಟ್ಟಾರೆ ಈ ಸುದ್ದಿ ಕರಾವಳಿಯಲ್ಲಿ ಸಖತ್ ವೈರಲ್ ಆಗುತ್ತಿದ್ದು, ಗುಳಿಗನ ದೃಷ್ಟಿ ಇನ್ನು ಯಾವ ಅವಾಂತರಕ್ಕೆ ಕಾರಣವಾಗುತ್ತದೋ ಕಾದುನೋಡಬೇಕಿದೆ.