ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ದಲಿತ ಚಳವಳಿಯ ಮುಂಚೂಣಿ ನಾಯಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್ (52) ಅವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಜೂ.19 ರಂದು ರಾತ್ರಿ ನಿಧನರಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನಲ್ಲಿ ಡಿ.ಸಿ. ಮನ್ನಾ ಜಮೀನಿಗಾಗಿನ ಹೋರಾಟ, ನಿಡ್ಲೆ ದೈವಸ್ಥಾನದ ಸಾರ್ವಜನಿಕ ಊಟದ ಪಂಕ್ತಿಯಿಂದ ದಲಿತ ಯುವತಿಯನ್ನು ಬಲಾತ್ಕಾರವಾಗಿ ಎಬ್ಬಿಸಿದ ಘಟನೆ ಮುಂದಿಟ್ಟು ನಡೆದ ಹೋರಾಟಗಳ ನೇತೃತ್ವವನ್ನು ವಹಿಸಿದ್ದರು. ಜತೆಗೆ ತಾಲೂಕಿನಲ್ಲಿ ಹಾಗೂ ಜಿಲ್ಲೆಯಲ್ಲಿ ನೂರಾರು ದಲಿತ, ಸಾಮಾಜಿಕ ಹೋರಾಟಗಳಿಗೆ ಮುಂಚೂಣಿ ನಾಯಕತ್ವ ವಹಿಸಿದ್ದರು.
ತಾಲೂಕಿನಲ್ಲಿ ಬಿ.ಎಸ್.ಪಿ ಪಕ್ಷವನ್ನು ಕಟ್ಟಿ ಬೆಳೆಸಿದ ಚಂದು ಎಲ್. ಅವರು ವಿಧಾನಸಭಾ ಚುನಾವಣೆಗೂ ಸ್ಪರ್ಧಿಸಿದ್ದರು. ಲಾಯಿಲ ಗ್ರಾ.ಪಂ. ಸದಸ್ಯರಾಗಿಯೂ ಸೇವೆ ಸಲ್ಲಿಸಿದರು. ಜನತಾದಳ ಪಕ್ಷದಿಂದ ಬೆಳ್ತಂಗಡಿ ತಾ.ಪಂ. ನ ಸದಸ್ಯರಾಗಿ ಆಯ್ಕೆಯಾದ ಅವರು ತಾ.ಪಂ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಅವರು 2013 ರಿಂದ 2018 ರ ತನಕ ಕರ್ನಾಟಕ ರಾಜ್ಯ ಸರಕಾರದ ಗೇರು ಅಭಿವೃದ್ಧಿ ನಿಗಮದ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.