ಬೆಂಗಳೂರು: ಯಡಿಯೂರಪ್ಪ ಸಂಪುಟದಲ್ಲಿ ಸಚಿವೆಯಾಗಿದ್ದು, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಶಶಿಕಲಾ ಜೊಲ್ಲೆ ಬೊಮ್ಮಾಯಿ ಸಂಪುಟದಲ್ಲಿ ಮತ್ತೆ ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದು ಪ್ರತಿಪಕ್ಷಗಳ ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಬಾರಿಯ ಯಡಿಯೂರಪ್ಪ ಸರಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿದ್ದ ಜೊಲ್ಲೆ, ಅಂಗನವಾಡಿಗೆ ಪೂರೈಕೆಯಾಗುತ್ತಿದ್ದ ಮೊಟ್ಟೆ ಖರೀದಿ ಟೆಂಡರ್ ವಿಚಾರದಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಹೇಳಲಾಗಿತ್ತು. ಇದಕ್ಕೆ ಸಂಬಂಧಿಸಿದ, ನಿಪ್ಪಾಣಿ ಶಾಸಕಿ ಶಶಿಕಲಾ ಅವರ ಭ್ರಷ್ಟಾಚಾರ ವಿಡಿಯೋ ಕೂಡ ಖಾಸಗಿ ಸುದ್ದಿ ಮಾಧ್ಯಮವೊಂದಕ್ಕೆ ಸಿಕ್ಕಿತ್ತು. ಇದರಲ್ಲಿ ವ್ಯಕ್ತಿಯೊಬ್ಬರಿಗೆ, “ನಿಮಗೆ ಟೆಂಡರ್ ಸಿಗುವಂತೆ ನಾನು ಮಾಡುತ್ತೇನೆ” ಎಂದು ಸಚಿವೆ ಮಾತನಾಡುವ ಸಂದರ್ಭ ದಾಖಲಾಗಿತ್ತು. ಮತ್ತು ಇನ್ನೊಂದು ಆಡಿಯೋದಲ್ಲಿ ಟೆಂಡರ್ ವಿಚಾರದಲ್ಲಿ ಸಚಿವೆ ಒಂದು ಕೋಟಿ ರೂಗೆ ಡೀಲ್ ಮಾಡಿರುವುದು ದಾಖಲಾಗಿತ್ತು. ಈ ಮೂಲಕ ಸಚಿವೆ ಅಕ್ರಮ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು. ಇದಲ್ಲದೆ ರಾಜಧಾನಿಯ ಜೆಸಿ ನಗರ ರಸ್ತೆಯಲ್ಲಿರುವ ಶಶಿಕಲಾ ನಿವಾಸದ ಮೇಲೆಯೂ ಮೊಟ್ಟೆ ಎಸೆದು ಪ್ರತಿಭಟನೆ ನಡೆಸಲಾಗಿತ್ತು.
ಈ ಎಲ್ಲ ಹಿನ್ನೆಲೆಯಿದ್ದರೂ ಮತ್ತೆ ಅವರಿಗೆ ಸಚಿವ ಸ್ಥಾನ ನೀಡಿರುವುದು ಮತ್ತೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ಭ್ರಷ್ಟರಿಗೆ ಅಧಿಕಾರ ನೀಡುತ್ತಿದೆ ಎನ್ನುವ ಮಾತು ಹಿಂದೆಯಿಂದಲೇ ಕೇಳಿಬರುತ್ತಿದೆ. ಇದು ಆ ಮಾತಿಗೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.