ಸಮಗ್ರ ನ್ಯೂಸ್: ಇದೊಂದು ನಿಜಕ್ಕೂ ಶಾಕ್ ತರಿಸುವ ಸಂಗತಿ. ಈ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾದವರು ಯಾವಾಗ ಬೇಕಾದರೂ, ಎಲ್ಲಿಗೆ ಬೇಕಾದರೂ ಹೋಗಿ ಬರಬಹುದು! ಇಂಥದ್ದೊಂದು ಪರಿಸ್ಥಿತಿ ಇರುವುದು ಸುಳ್ಯ ತಾಲೂಕಿನ ಸುಳ್ಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಂದರೆ ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ..!
ಹೌದು, ಇಲ್ಲಿ ದಾಖಲಾದ ರೋಗಿಗಳು ಯಾವೂದೇ ಸುರಕ್ಷತೆಯಿಲ್ಲ. ರೋಗಿಯ ಸಹಾಯಕರು ಆತನನ್ನು ಬಿಟ್ಟು ಆಚೀಚೆ ಹೋದರೆ ರೋಗಿಗಳು ಎದ್ದು ಹೊರಗಡೆ ಹೋಗಬಹುದು. ಕೈಯಲ್ಲಿರುವ ಡ್ರಿಪ್ಸ್ ಪೈಪ್ ಸಹಿತ ಪೇಟೆಗೂ ಹೋಗಿ ಬರಬಹುದು. ಇದನ್ನು ಇಲ್ಲಿ ಯಾರೂ ಕೇಳೋರಿಲ್ಲ.
ಆಸ್ಪತ್ರೆ ಸಿಬ್ಬಂದಿ ತಾವು ತಮ್ಮ ಕೆಲಸವನ್ನು ನಿರ್ವಹಿಸುತ್ತಾರೆ ಹೊರತು ಅದೆಷ್ಟು ಪರಿಪೂರ್ಣವಾಗಿ ಅನ್ನೋದನ್ನು ಕೇಳಬಾರದು. ಇಲ್ಲಿ ಒಳರೋಗಿ ಒಂದು ವೇಳೆ ಕಾಣೆಯಾದರೆ ಅದಕ್ಕೂ ಇಲ್ಲಿನ ಸಿಬ್ಬಂದಿಗೂ ಯಾವುದೇ ಸಂಬಂಧವಿಲ್ಲ. ಬೆಡ್ ನಲ್ಲಿ ಇರುವ ರೋಗಿಗಳನ್ನಷ್ಟೇ ನೋಡಿಕೊಳ್ತಾರೆ ಅಷ್ಟೇ…
ಸುಳ್ಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಸೂತಿ ತಜ್ಞರ ಬಗ್ಗೆಯೂ ಈ ಹಿಂದೆ ಚರ್ಚೆಯಾಗಿತ್ತು. ಮಾನವೀಯ ನೆಲಯಲ್ಲಿ ಹೊರಗಿನ ತಜ್ಞರು ಬಂದು ಕೆಲಸ ನಿರ್ವಹಿಸಿದ್ದಕ್ಕೆ ಆಕ್ಷೇಪ, ಆರೋಪಗಳೂ ಕೇಳಿಬಂದಿತ್ತು. ಈ ಸಾಲಿಗೆ ಇದೀಗ ಹೊಸದೊಂದು ಪ್ರಕರಣವೂ ಸೇರಿದೆ.
ಈ ಕುರಿತಂತೆ ತಾಲೂಕು ಆರೋಗ್ಯಾಧಿಕಾರಿಗಳನ್ನು ವಿಚಾರಿಸಿದಾಗ ಸಿಬ್ಬಂದಿ ಕೊರತೆ ಇರುವುದನ್ನು ಒಪ್ಪಿಕೊಂಡಿದ್ದಾರೆ. ರೋಗಿಗಳ ಸುರಕ್ಷತಾ ದೃಷ್ಟಿಯಿಂದ ಆಸ್ಪತ್ರೆಗೆ ಭೇಟಿ ನೀಡುವವರ ಮತ್ತು ರೋಗಿಗಳ ಓಡಾಟದ ಕುರಿತು ಕೂಡಲೇ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹ.