ಸಮಗ್ರ ನ್ಯೂಸ್: ದ.ಕ. ಜಿಲ್ಲೆಯಲ್ಲಿ ಸಿಡಿಲು-ಗುಡುಗಿನಿಂದ ಸಾವು ಪ್ರಕರಣ ಹೆಚ್ಚಾಗಿ ಸಂಭವಿಸುವ ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಿಂಚು ಪ್ರತಿಬಂಧಕ ವ್ಯವಸ್ಥೆಯನ್ನು ಅಳವಡಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಳೆಗಾಲದ ಸಂದರ್ಭ ಸಂಭವನೀಯ ಪ್ರಾಕೃತಿಕ ವಿಕೋಪದ ಸಿದ್ಧತೆ ಸೇರಿದಂತೆ ವಿವಿಧ ವಿಷಯಗಳ ಕುರಿತಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ಸಚಿವರು ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.
ಆರಂಭಿಕ ಹಂತದಲ್ಲಿ ಸುಳ್ಯ, ಬೆಳ್ತಂಗಡಿ, ಸುಬ್ರಹ್ಮಣ್ಯದ ಕೆಲವೆಡೆ ನಾಲ್ಕೈದು ಕಡೆಗಳಲ್ಲಿ ಈ ಪ್ರತಿಬಂಧಕಗಳನ್ನು ಪ್ರಾಯೋಗಿಕವಾಗಿ ಜಿಲ್ಲಾಡಳಿತದ ವತಿಯಿಂದ ಅಳವಡಿಸಲು ಕ್ರಮ ವಹಿಸಲಾಗುತ್ತಿದೆ. ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈಗಾಗಲೇ ದೇವಸ್ಥಾನದ ವತಿಯಿಂದ ಮಿಂಚು ಪ್ರತಿಬಂಧಕ ವ್ಯವಸ್ಥೆ ಅಳವಡಿಸಲಾಗಿದೆ. ಇದು 500 ಮೀಟರ್ನಿಂದ 1.5 ಕಿ.ಮೀ. ವ್ಯಾಪ್ತಿವರೆಗಿನ ಪ್ರದೇಶದಲ್ಲಿ ಮಿಂಚಿನಿಂದಾಗುವ ಅಪಾಯಗಳಿಂದ ರಕ್ಷಣೆ ನೀಡಲಿದೆ ಎಂದರು.