ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧ ಬಂಧಿಸಲಾಗಿದ್ದ ನೈಜಿರಿಯನ್ ಪ್ರಜೆ ಠಾಣೆಯಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಜೆಸಿ ನಗರ ಪೊಲೀಸ್ ಠಾಣೆಯ ಮುಂದೆ ನೈಜಿರಿಯನ್ ಪ್ರಜೆಗಳು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ನೈಜಿರಿಯನ್ ಪ್ರಜೆಗಳ ಮೇಲೆ ಪೊಲೀಸರು ಲಾಠಿ ಚಾರ್ಚ್ ನಡೆಸಿದ್ದು ಹಲವರನ್ನು ಬಂಧಿಸಿದ್ದಾರೆ.
ಡ್ರಗ್ಸ್ ಬಗ್ಗೆ ಮಾಹಿತಿ ಸಿಕ್ಕ ಹಿನ್ನಲೆಯಲ್ಲಿ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ನೈಜಿರಿಯನ್ ಪ್ರಜೆ ಗಲಾಟೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದನು. ಆದರೆ ಪೊಲೀಸರು ಆತನನ್ನು ಬಂಧಿಸಿ ಠಾಣೆಗೆ ಕರೆತಂದಿದ್ದರು.
ಪೊಲೀಸರ ವಶದಲ್ಲಿದ್ದ ಆಫ್ರಿಕನ್ ಪ್ರಜೆ ಸಾವನ್ನಪ್ಪಿದ್ದಾನೆ. ವೈದ್ಯರು ಹೃದಯಾಘಾತದಿಂದಾಗಿ ಆತ ಮೃತಪಟ್ಟಿರುವುದಾಗಿ ವರದಿ ನೀಡಿದ್ದಾರೆ.ಆದರೆ ನೈಜಿರಿಯನ್ ಪ್ರಜೆಗಳು ಪೊಲೀಸರೇ ಹೊಡೆದು ಸಾಯಿಸಿದ್ದಾರೆ ಎಂದು ಜೆಸಿ ನಗರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಪೊಲೀಸರ ಮೇಲೆ ಕೂಗಾಟ, ತಳ್ಳಾಟ ಮಾಧ್ಯಮಗಳ ಮೇಲೂ ಹಲ್ಲೆಗೆ ಯತ್ನ ಮಾಡಿದ್ದಾರೆ. ಚಪ್ಪಾಳೆ ತಟ್ಟುವ ಮೂಲಕ ಪೊಲೀಸರ ಮೇಲೆ ಗಲಾಟೆ ಮಾಡುತ್ತಾ ಮಹಿಳಾ ಸಿಬ್ಬಂದಿ ಮೇಲೆ ಪ್ರತಿಭಟನಾಕಾರರು ಎಗರಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಪ್ರತಿಭಟನಾಕಾರರನ್ನ ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿ ಅಟ್ಟಾಡಿಸಿಕೊಂಡು ಪೊಲೀಸರು ಲಾಠಿ ಬೀಸಿದ್ದಾರೆ. ರಸ್ತೆ ರಸ್ತೆಗಳಲ್ಲಿ ನುಗ್ಗಿ ಪೊಲೀಸ್ ಲಾಠಿ ಏಟು ಕೊಟ್ಟಿದ್ದಾರೆ. ಆದರೆ ಬಹುತೇಕರು ಓಡಿ ಎಸ್ಕೇಪ್ ಆಗಿದ್ದಾರೆ.
ಜಾನ್ ಸಾವನ್ನಪ್ಪಿರುವ ವಿಷಯ ಬಹಿರಂಗ ವಾಗುತ್ತಿದ್ದಂತೆ ಜೆಸಿ ನಗರ ಪೊಲೀಸ್ ಠಾಣೆಗೆ ವಿದೇಶಿ ಪ್ರಜೆಗಳು ದೌಡಾಯಿಸಿ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸಂಜೆಯಾಗುತಿದಂತೆ ಮುತ್ತಿಗೆ ಹಾಕಿ ಪೊಲೀಸರ ದಾಂಧಲೆಗೆ ಯತ್ನಿಸಿದ್ದಾರೆ. ಅದಲ್ಲದೆ ಪೊಲೀಸರು ಹಲ್ಲೆಗೈದು ಕೊಲೆ ಮಾಡಿದ್ದಾರೆ ಎಂದು ನೈಜಿರೀಯಾ ಪ್ರಜೆಗಳು ಪೊಲೀಸರ ಮೇಲೆ ಕೊಲೆ ಆರೋಪ ಮಾಡಿದ್ದಾರೆ. ಪೊಲೀಸರನ್ನ ಆಫ್ರಿಕನ್ ಪ್ರಜೆಗಳು ಅವಾಚ್ಯವಾಗಿ ಬೈದು, ಕೆಟ್ಟದಾಗಿ ಪೊಲೀಸರನ್ನು ಗುರಿಯಾಗಿಸಿ ಸನ್ನೆ, ಬೆಂಕಿ ಕಡ್ಡಿ ಗೀರಿ ಗುಂಡಾವರ್ತನೆ ತೋರಿದ್ದಾರೆ.