ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ NDA ಮುನ್ನಡೆ ಸಾಧಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ಎಕ್ಸ್ ನಲ್ಲಿ ಸಂದೇಶವೊಂದನ್ನು ಪೋಸ್ಟ್ ಮಾಡಿದ ಮೋದಿ, ಜನರು ಸತತ ಮೂರನೇ ಬಾರಿಗೆ ಎನ್‌ಡಿಎ ಮೇಲೆ ನಂಬಿಕೆ ಇಟ್ಟಿದ್ದಾರೆ. ಇದು ಭಾರತದ ಇತಿಹಾಸದಲ್ಲಿ ಒಂದು ಐತಿಹಾಸಿಕ ಸಾಧನೆಯಾಗಿದೆ. ಈ ಪ್ರೀತಿಗಾಗಿ ನಾನು ಜನತಾ ಜನಾರ್ದನ್ ಗೆ ನಮಸ್ಕರಿಸುತ್ತೇನೆ. ಜನರ ಆಶೋತ್ತರಗಳನ್ನು ಈಡೇರಿಸಲು ಕಳೆದ ದಶಕದಲ್ಲಿ ಮಾಡಿದ ಉತ್ತಮ ಕೆಲಸವನ್ನು ನಾವು ಮುಂದುವರಿಸುತ್ತೇವೆ ಎಂದು ಅವರಿಗೆ ಭರವಸೆ ನೀಡುತ್ತೇನೆ. ಪರಿಶ್ರಮಕ್ಕಾಗಿ ನಾನು ನಮ್ಮ ಎಲ್ಲಾ ಕಾರ್ಯಕರ್ತರಿಗೆ ಧನ್ಯನಾದಗಳನ್ನು ಅರ್ಪಿಸುತ್ತೇನೆ. ಅವರ ಅಸಾಧಾರಣ ಪ್ರಯತ್ನಗಳಿಗೆ ಪದಗಳು ಎಂದಿಗೂ ನ್ಯಾಯ ಸಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ ಒಡಿಶಾದ ಜನರಿಗೆ ಧನ್ಯವಾದ ಹೇಳಿದ್ದಾರೆ. ಧನ್ಯವಾದಗಳು ಒಡಿಶಾ! ಇದು ಉತ್ತಮ ಆಡಳಿತಕ್ಕೆ ಮತ್ತು ಒಡಿಶಾದ ವಿಶಿಷ್ಟ ಸಂಸ್ಕೃತಿಗೆ ಸಂದ ಜಯವಾಗಿದೆ. ಜನರ ಕನಸುಗಳನ್ನು ನನಸು ಮಾಡುವಲ್ಲಿ ಮತ್ತು ಒಡಿಶಾವನ್ನು ಅಭಿವೃದ್ಧಿಯ ಹೊಸ ಮಟ್ಟಕ್ಕೆ ಬಿಜೆಪಿ ಕೊಂಡೊಯ್ಯುತ್ತದೆ. ನಮ್ಮ ಪಕ್ಷದ ಶ್ರಮಜೀವಿ ಕಾರ್ಯಕರ್ತರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ಎಂದು ಮೋದಿ ಹೇಳಿದ್ದಾರೆ.
ಜೊತೆಗೆ ಆಂಧ್ರಪ್ರದೇಶದ ಜನರಿಗೂ ಮೋದಿ ಥ್ಯಾಂಕ್ಸ್ ಹೇಳಿದ್ದಾರೆ. ಆಂಧ್ರಪ್ರದೇಶ ಎನ್‌ಡಿಎಗೆ ಅಸಾಧಾರಣ ಜನಾದೇಶ ನೀಡಿದೆ ಆಶೀರ್ವಾದಕ್ಕಾಗಿ ರಾಜ್ಯದ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ. ನಾನು ಈ ವಿಜಯಕ್ಕಾಗಿ ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್ , ಟಿಡಿಪಿ, ಜನಸೇನಾ ಪಾರ್ಟಿ, ಆಂಧ್ರ ಪ್ರದೇಶದ ಬಿಜೆಪಿಗೆ ಅಭಿನಂದನೆ ಸಲ್ಲಿಸುತ್ತೇವೆ.ನಾವು ಆಂಧ್ರ ಪ್ರದೇಶದ ಸರ್ವತೋಮುಖ ಪ್ರಗತಿಗಾಗಿ ಕೆಲಸ ಮಾಡುತ್ತೇವೆ ಮತ್ತು ಮುಂದಿನ ದಿನಗಳಲ್ಲಿ ರಾಜ್ಯವು ಏಳಿಗೆಯನ್ನು ಖಚಿತಪಡಿಸಿಕೊಳ್ಳುತ್ತೇವೆ ಎಂದಿದ್ದಾರೆ ಪ್ರಧಾನಿ.