ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಂದುವರಿಯುತ್ತಿರುವ ನಡುವೆ ಪ್ರತಿ ಕ್ಷಣವೂ ಕುತೂಹಲ ಮೂಡಿಸುತ್ತಿದೆ. ಬಿಜೆಪಿಗೆ ಸ್ಪಷ್ಟ ಬಹುಮತ ದೊರೆಯದೇ ಇರುವ ಸಾಧ್ಯತೆ ಅಧಿಕವಾಗಿರುವ ಹಿನ್ನೆಲೆಯಲ್ಲಿ, ಬಿಜೆಪಿಯ ಮಿತ್ರ ಪಕ್ಷಗಳ ಪೈಕಿ ಯಾರು ಕಿಂಗ್ಮೇಕರ್ ಆಗಲಿದ್ದಾರೆಂಬ ಕುತೂಹಲ ಮೂಡಿದೆ.
ಪ್ರಸ್ತುತ 16 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಟಿಡಿಪಿ ಹಾಗೂ 15ರಲ್ಲಿ ಮುನ್ನಡೆ ಸಾಧಿಸಿರುವ ಜೆಡಿಯು ಗೆದ್ದರೆ ಎನ್ಡಿಎಗೆ 31 ಅಧಿಕ ಸ್ಥಾನಗಳು ಲಭಿಸುವಂತಾಗುತ್ತದೆ. ಬಿಜೆಪಿ ಬಹುಮತ ಪಡೆಯದೇ ಇದ್ದಲ್ಲಿ ಈ ಎರಡೂ ಪಕ್ಷಗಳ ಬೆಂಬಲ ಅದಕ್ಕೆ ಖಂಡಿತಾ ಬೇಕಾಗುವಂತಹ ಪರಿಸ್ಥಿತಿ ಇದೆ.
ನೂತನ ಸರ್ಕಾರದಲ್ಲಿ ಟಿಡಿಪಿ ಮತ್ತು ಜೆಡಿ(ಯು) ಪ್ರಮುಖ ಪಾತ್ರ ವಹಿಸಿದರೆ, ನರೇಂದ್ರ ಮೋದಿ ಅವರ ಸಂಭಾವ್ಯ ಮೂರನೇ ಅಧಿಕಾರಾವಧಿ ಸಾಕಷ್ಟು ದುರ್ಬಲವಾಗಿರಲಿದೆ. ಹಲವಾರು ಪ್ರಮುಖ ನೀತಿಗಳಿಗೆ ಸಂಬಂಧಿಸಿದಂತೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಬಹುದು. ಅಷ್ಟೇ ಅಲ್ಲದೆ ಮೋದಿ ಆಡಳಿತದ ಹಲವು ಮಹತ್ವಾಕಾಂಕ್ಷೆಗಳಿಗೆ ಇದು ಅಡ್ಡಿಯಾಗಬಹುದು.
ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಈ ಬಾರಿ ಅಧಿಕಾರದಿಂದ ಕೆಳಗಿಳಿಸಲೇ ಬೇಕು ಎಂದು ಪಣತೊಟ್ಟಿರುವ ಇಂಡಿ ಒಕ್ಕೂಟ, ಎನ್ಡಿಎ ಮೈತ್ರಿಕೂಟದ ಭಾಗವಾಗಿ ಪ್ರಮುಖ ಪಾತ್ರ ವಹಿಸಲಿರುವ ಜೆಡಿಯು ಹಾಗೂ ಟಿಡಿಪಿ ಪಕ್ಷಕ್ಕೆ ಬಿಗ್ ಆಫರ್ಅನ್ನು ನೀಡಿದೆ. ಮೂಲಗಳ ಪ್ರಕಾರ ನಿತೀಶ್ ಕುಮಾರ್ಗೆ ಇಂಡಿ ಒಕ್ಕೂಟದ ನಾಯಕರು ಉಪಪ್ರಧಾನಿ ಸ್ಥಾನವನ್ನು ಆಫರ್ ಮಾಡಿದ್ದಾರೆ ಎಂದು ವರದಿಯಾಗಿದೆ. ಇನ್ನು ಆಂಧ್ರಪ್ರದೇಶದ ವಿಧಾನಸಭೆಯಲ್ಲೂ ಅಧಿಕಾರ ಪಡೆದುಕೊಂಡಿರುವ ಟಿಡಿಪಿ ಪಕ್ಷವನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳಲು ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಆಫರ್ಅನ್ನು ಚಂದ್ರಬಾಬು ನಾಯ್ಡುಗೆ ನೀಡಿದೆ ಎನ್ನಲಾಗಿದೆ. ಇನ್ನೊಂದೆಡೆ ಬಿಜೆಪಿ ಎರಡೂ ಪಕ್ಷಗಳ ನಾಯಕರೊಂದಿಗೆ ಮಾತನಾಡಿದ್ದು, ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ