ಸಮಗ್ರ ನ್ಯೂಸ್: ಪೊಲೀಸರು ಭಯೋತ್ಪಾದಕರನ್ನು ಹಿಡಿದು ತಂದಾಗಲೂ ಪೊಲೀಸ್ ಠಾಣೆಗೆ ನುಗ್ತೀರಾ? ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರನ್ನು ಉಚ್ಚ ನ್ಯಾಯಾಲಯ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರನ್ನು ನಿಂದಿಸಿ, ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ ಆರೋಪದಡಿ ದಾಖಲಾದ ಎಫ್‌ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಉಚ್ಚ ನ್ಯಾಯಾಲಯ ಶಾಸಕರ ವಿರುದ್ಧ ಅಸಮಾಧಾನ ಹೊರಹಾಕಿದೆ.
ಪೊಲೀಸ್ ಠಾಣೆಗೆ ಏಕೆ ಹೋಗಿದ್ದು? ಶಾಸಕರಾದ ಮಾತ್ರಕ್ಕೆ ಠಾಣೆಗೆ ಹೋಗಿ ಪೊಲೀಸರ ಕೆಲಸಕ್ಕೆ ಅಡ್ಡಿಪಡಿಸಬಹುದೇ? ಭಯೋತ್ಪಾದಕರನ್ನು ಪೊಲೀಸರು ಹಿಡಿದು ತಂದರೆ, ಆಗಲೂ ಪೊಲೀಸ್ ಠಾಣೆಗೆ ಹೋಗಿ ಪೊಲೀಸರನ್ನು ಪ್ರಶ್ನೆ ಮಾಡುವಿರಾ? ಇದನ್ನೆಲ್ಲಾ ಒಪ್ಪಲು ಆಗುವುದಿಲ್ಲ. ನಾಳೆ ನ್ಯಾಯಾಧೀಶರು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂದು ನೋಡಲು ನ್ಯಾಯಾಲಯಕ್ಕೆ ಬಂದು ನಮ್ಮ ಮುಂದೆ ಕುಳಿತರೆ ಹೇಗೆ? ಆಗ ಏನು ಮಾಡುವುದು ಎಂದು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಪೀಠ ಖಾರವಾಗಿ ಪ್ರಶ್ನಿಸಿದೆ.
ಶಾಸಕರು ಇರೋದು ಶಾಸನ ರೂಪಿಸಲು. ಅದರಂತೆ ಶಾಸನ ರಚನೆ ಮಾಡುವುದಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು. ಅದುಬಿಟ್ಟು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವುದಲ್ಲ ಎಂದು ಪೀಠ ಹೇಳಿದೆ. ನಂತರ ಅರ್ಜಿಯಲ್ಲಿ ಪ್ರತಿವಾದಿಯಾದ ಬೆಳ್ತಗಂಡಿ ಠಾಣಾ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.