ಸಮಗ್ರ ನ್ಯೂಸ್: ಮುಂದಿನ 24 ಗಂಟೆಗಳಲ್ಲಿ ಮುಂಗಾರು ಪ್ರವೇಶಿಸಲಿದೆ. ಮುಂಗಾರು ಪ್ರವೇಶದಿಂದಾಗಿ ಕೇರಳದಲ್ಲಿ ಮಳೆಯಾಗಲಿದೆ. ನಂತರ ಈಶಾನ್ಯ ಭಾರತದ ಕೆಲ ರಾಜ್ಯಗಳಲ್ಲಿ ಮಳೆಯಾಗಲಿದೆ. ಉಷ್ಣ ಗಾಳಿಯಿಂದ ಕಂಗೆಟ್ಟಿದ್ದ ಜನರಿಗೆ ಮುಂಗಾರು ಪ್ರವೇಶವು ತುಸು ರಿಲೀಫ್ ನೀಡಲಿದೆ. ಭಾರತದ ವಾಯವ್ಯ ಹಾಗೂ ಕೇಂದ್ರ ಭಾಗದಲ್ಲಿ ಉತ್ತಮ ಮಳೆಯಾಗುವ ಕಾರಣ ಕೃಷಿ ಚಟುವಟಿಕೆಗಳ ಆರಂಭಕ್ಕೆ ಮುನ್ನುಡಿ ಬರೆಯಲಿದೆ. ಸುಮಾರು 3-4 ಡಿಗ್ರಿ ಸೆಲ್ಸಿಯಸ್ ತಾಪಮಾನವು ಇಳಿಕೆಯಾಗಲಿದೆ’ ಎಂಬುದಾಗಿ ಹವಾಮಾನ ಇಲಾಖೆ ತಿಳಿಸಿದೆ.
ಜೂನ್ 1ರಂದು ಮುಂಗಾರು ಮಳೆಯು ಕೇರಳವನ್ನು ಪ್ರವೇಶಿಸಿ, ಜುಲೈ 15ರ ವೇಳೆಗೆ ದೇಶಾದ್ಯಂತ ವ್ಯಾಪಿಸುತ್ತದೆ. ಆದರೆ, ಈ ಬಾರಿ ಒಂದು ದಿನ ಮೊದಲೇ ಅಂದರೆ, ಮೇ 31ರಂದು ಮುಂಗಾರು ಪ್ರವೇಶಿಸುತ್ತದೆ ಎಂಬುದಾಗಿ ಹವಾಮಾನ ಇಲಾಖೆ ತಿಳಿಸಿತ್ತು. ಬುಧವಾರ ಹವಾಮಾನ ಇಲಾಖೆ ನೀಡಿರುವ ಮಾಹಿತಿ ನೋಡಿದರೆ, ಮೇ 30ರಂದೇ ಮುಂಗಾರು ಪ್ರವೇಶಿಸಲಿದೆ. ಕೇರಳದಲ್ಲಿ ಮಳೆಯಾದರೆ, ದಕ್ಷಿಣ ಕನ್ನಡ, ಕೊಡಗು ಸೇರಿ ಹಲವೆಡೆ ಮಳೆಯಾಗುವುದು ನಿಶ್ಚಿತ ಎಂದೇ ಹೇಳಲಾಗುತ್ತಿದೆ. ಕೇರಳದಲ್ಲಿ ಈಗಾಗಲೇ ಒಂದು ವಾರದಿಂದ ಭಾರಿ ಮಳೆಯಾಗಿದೆ. ಮುಂಗಾರು ಪ್ರವೇಶದಿಂದ ಲಕ್ಷದ್ವೀಪ ಸೇರಿ ಹಲವು ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಮುಂಗಾರು ಮಳೆಯು ದೇಶದ ಕೃಷಿಯ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ, ಈ ಬಾರಿ ವಾಡಿಕೆಗಿಂತ ಒಂದು ದಿನ ಮೊದಲೇ ಅಂದರೆ, ಮೇ 30 ದೇಶವನ್ನು ಮುಂಗಾರು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿರುವುದು ರೈತರ ಪಾಲಿಗೆ ಸಿಹಿ ಸುದ್ದಿಯೇ ಆಗಿದೆ. ಮೇ 27ರಿಂದ ಜೂನ್ 4ರ ಅವಧಿಯಲ್ಲಿ ಯಾವಾಗ ಬೇಕಾದರೂ ನೈಋತ್ಯ ಮುಂಗಾರು ಪ್ರವೇಶಿಸಬಹುದು ಎಂದು ಹವಾಮಾನ ಇಲಾಖೆ ಇದಕ್ಕೂ ಮೊದಲು ತಿಳಿಸಿತ್ತು. ಪ್ರತಿ ವರ್ಷ ಜೂನ್ 1ರಂದು ಮುಂಗಾರು ಮಳೆಯು ಕೇರಳವನ್ನು ಪ್ರವೇಶಿಸಿ, ದೇಶಾದ್ಯಂತ ವ್ಯಾಪಿಸುವುದು ವಾಡಿಕೆಯಾಗಿದೆ. ಆದರೆ, ಹವಾಮಾನ ಇಲಾಖೆಯು ಈ ಬಾರಿ 2 ದಿನ ಮೊದಲೇ ಪ್ರವೇಶಿಸಲಿದೆ ಎಂದು ತಿಳಿಸಿದೆ. ಸೆಪ್ಟೆಂಬರ್‌ನಲ್ಲಿ ಮುಂಗಾರು ಮಳೆ ಅಂತ್ಯವಾಗಲಿದೆ.