ಸಮಗ್ರ ನ್ಯೂಸ್: ಭಾರತ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಟಿ20 ವಿಶ್ವಕಪ್ ಬಳಿಕ ಹುದ್ದೆಯಿಂದ ಕೆಳಗಿಳಿಯಲಿರುವ ಹಿನ್ನಲೆಯಲ್ಲಿ ಬಿಸಿಸಿಐ ನೂತನ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಮೇ 27 ಕೊನೆಯ ದಿನವಾಗಿದೆ. ಇದರ ಬೆನ್ನಲ್ಲೇ ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್, ತಮ್ಮ ಒಂದು ಷರತ್ತು ಒಪ್ಪಿದರೆ ಕೋಚ್ ಆಗಲು ಸಿದ್ದ ಎಂದು ಹೇಳಿದ್ದಾರೆ.
ಗೌತಮ್ ಗಂಭೀರ್ ಭಾರತದ ಮುಖ್ಯ ಕೋಚ್ ಆಗಲು ಉತ್ಸುಕರಾಗಿದ್ದು, ‘ಆಯ್ಕೆಯ ಗ್ಯಾರಂಟಿ’ ನೀಡಿದರೆ ಮಾತ್ರ ಗಂಭೀರ್ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಸಿದ್ಧರಿದ್ದಾರೆ ಎಂದು ದೈನಿಕ್ ಜಾಗರಣ್ ನಲ್ಲಿ ವರದಿಯಾಗಿದೆ. ಇದರ ಜೊತೆಗೆ ತಮ್ಮನ್ನು ಕೋಚ್ ಆಗಿ ಸೆಲೆಕ್ಟ್ ಮಾಡುವ ಗ್ಯಾರಂಟಿ ನೀಡಿದರಷ್ಟೇ ತಾವು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುತ್ತೇನೆ’ ಇಲ್ಲದಿದ್ದರೆ ತಾವು ನಾಮಾಕಾವಸ್ತೆಗಾಗಿ ಅರ್ಜಿ ಹಾಕುವುದಿಲ್ಲ ಎಂದು ಗೌತಿ ಖಡಕ್ ಆಗಿ ಕಂಡೀಷನ್ ಹಾಕಿದ್ದಾರೆ ಎಂದು ಮಾಹಿತಿ ಲಭ್ಯವಿದೆ.
ಇನ್ನು ಟೀಂ ಇಂಡಿಯಾ ಕೋಚ್ ಹುದ್ದೆಗೆ ರಿಕಿ ಪಾಂಟಿಂಗ್, ಜಸ್ಟಿನ್ ಲ್ಯಾಂಗರ್, ಸ್ಟೀಫನ್ ಪ್ಲೆಮಿಂಗ್, ಆಂಡಿ ಫ್ಲವರ್ ಸೇರಿದಂತೆ ಹಲವು ಹೆಸರುಗಳು ಕೇಳಿಬಂದಿದ್ದರೂ, ಬಿಸಿಸಿಐ, ಗೌತಮ್ ಗಂಭೀರ್ ಅವರನ್ನು ಆಯ್ಕೆ ಮಾಡಲು ಒಲವು ತೋರಿದೆ ಎನ್ನಲಾಗುತ್ತಿದೆ. ಗೌತಮ್ ಗಂಭೀರ್ ಒಂದು ವೇಳೆ ಟೀಂ ಇಂಡಿಯಾ ಹೆಡ್ ಕೋಚ್ ಆಗಿ ನೇಮಕವಾದರೆ, ಕೆಕೆಆರ್ ತಂಡದ ಮೆಂಟರ್ ಹುದ್ದೆಯನ್ನು ಕೈಬಿಡಬೇಕಾಗುತ್ತದೆ.
ನೂತನ ಕೋಚ್ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಯೂ ಈ ಕೋಚ್‍ಗೆ ಸಿಗಲಿದೆ. ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಇದೇ 27ರಂದು ಕೊನೆಯ ದಿನವಾಗಿದೆ. ಆಯ್ಕೆ ಪ್ರಕ್ರಿಯೆ ಅರ್ಜಿಗಳ ಸಂಪೂರ್ಣ ಪರಿಶೀಲನೆಯನ್ನು ನಡೆಸಿ ನಂತರ ವೈಯಕ್ತಿಕ ಸಂದರ್ಶನಗಳು ಮತ್ತು ಶಾರ್ಟ್‍ಲಿಸ್ಟ್ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನ ಒಳಗೊಂಡಿರುತ್ತದೆ. ಆಯ್ಕೆಯಾದ ಹೊಸ ಕೋಚ್ ಟಿ20 ವಿಶ್ವಕಪ್ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.