ಸಮಗ್ರ ನ್ಯೂಸ್: ಗುಜರಾತ್ ನ ರಾಜ್‌ಕೋಟ್‌ನಲ್ಲಿರುವ ಟಿಆರ್‌ಪಿ ಗೇಮ್ ಝೋನ್‌ನಲ್ಲಿ ಶನಿವಾರ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಈ ಅಗ್ನಿ ಅವಘಡದಲ್ಲಿ ಕನಿಷ್ಠ 24 ಮಂದಿ ಸಾವಿಗೀಡಾಗಿರುವ ಸುದ್ದಿ ಬಂದಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರುವ ಸಾಧ್ಯತೆ ಇದೆ. ಸಂಪೂರ್ಣ ಗೇಮಿಂಗ್ ಜೋನ್‌ನ ಫೆಸಿಲಿಟಿಯೇ ಬೆಂಕಿಯಲ್ಲಿ ಮುಳುಗಿರುವ ಕಾರಣ, ಮಕ್ಕಳು ಸೇರಿದಂತೆ ಹಲವಾರು ಮಂದಿ ಈ ಜೋನ್‌ನಲ್ಲಿ ಸಿಲುಕಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ. ರಾಜ್‌ಕೋಟ್‌ನ ಗೇಮ್ ಝೋನ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ತಕ್ಷಣದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಆಡಳಿತಕ್ಕೆ ಸೂಚನೆಗಳನ್ನು ನೀಡಲಾಗಿದೆ ಎಂದು ಭೂಪೇಂದ್ರ ಪಟೇಲ್ ಟ್ವೀಟ್ ಮಾಡಿದ್ದಾರೆ.
ಮಧ್ಯಾಹ್ನದ ವೇಳೆ ಟಿಆರ್‌ಪಿ ಗೇಮಿಂಗ್ ವಲಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇಲ್ಲಿಯವರೆಗೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸದ್ಯ ಬೆಂಕಿ ನಿಯಂತ್ರಣದಲ್ಲಿದೆ. ನಾವು ಸಾಧ್ಯವಾದಷ್ಟು ಶವಗಳನ್ನು ಹೊರತೆಗೆಯಲು ಪ್ರಯತ್ನ ಮಾಡುತ್ತಿದ್ದೇವೆ. ಇಲ್ಲಿಯವರೆಗೂ ಖಚಿತವಾಗಿ ನಾವು 20 ಶವಗಳನ್ನು ಹೊರತೆಗೆದಿದ್ದೇವೆ. ಹೆಚ್ಚಿನ ತನಿಖೆಗಾಗಿ ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಯುವರಾಜ್ ಸೋಲಂಕಿ ಎನ್ನುವ ವ್ಯಕ್ತಿಯ ಮಾಲೀಕತ್ವದ ಗೇಮಿಂಗ್ ಜೋನ್ ಇದಾಗಿದೆ. ಇಲ್ಲಿ ಆಗಿರುವ ಸಾವಿಗೆ ಸಂಬಂಧಪಟ್ಟಂತೆ ಅವರ ವಿರುದ್ಧ ನಿರ್ಲಕ್ಷ್ಯದ ದೂರನ್ನು ದಾಖಳಿ ಮಾಡಿದ್ದೇವೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಳಿಸಿದ ಬಳಿಕ ಮುಂದಿನ ತನಿಖೆ ನಡೆಸಲಿದ್ದೇವೆ’ ಎಂದು ರಾಜ್‌ಕೋಟ್‌ನ ಪೊಲೀಸ್ ಕಮಿಷನರ್ ರಾಜು ಭಾರ್ಗವ ತಿಳಿಸಿದ್ದಾರೆ. ಗೇಮಿಂಗ್ ಜೋನ್‌ನ ಮಾಲೀಕ ಯುವರಾಜ್ ಸೋಲಂಕಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಗಾಳಿಯಿಂದಾಗಿ ಬೆಂಕಿ ನಂದಿಸುವ ಕಾರ್ಯ ಕಷ್ಟಕರವಾಗಿದೆ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಬೆಂಕಿ ನಂದಿಸುವ ಪ್ರಯತ್ನಗಳು ನಡೆಯುತ್ತಿವೆ. ನಾಪತ್ತೆಯಾದವರ ಬಗ್ಗೆ ನಮಗೆ ಯಾವುದೇ ಸಂದೇಶ ಬಂದಿಲ್ಲ. ತಾತ್ಕಾಲಿಕ ರಚನೆಯು ಕುಸಿದು ಬಿದ್ದಿರುವುದರಿಂದ ಮತ್ತು ಗಾಳಿಯ ವೇಗದಿಂದಾಗಿ ನಾವು ಅಗ್ನಿಶಾಮಕ ಕಾರ್ಯಾಚರಣೆಯಲ್ಲಿ ತೊಂದರೆ ಎದುರಿಸುತ್ತಿದ್ದೇವೆ. ,” ಅಗ್ನಿಶಾಮಕ ಅಧಿಕಾರಿ ಐವಿ ಖೇರ್ ತಿಳಿಸಿದ್ದಾರೆ.