ಮಂಗಳೂರು: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾದ ಹಿನ್ನಲೆ, ಜಿಲ್ಲೆಯಲ್ಲಿ ಎಲ್ಲಾ ಸಭೆ ಸಮಾರಂಭಗಳು ಸೇರಿದಂತೆ ಇತರ ಚಟುವಟಿಕೆಗಳಿಗೆ ಕಠಿಣ ನಿಯಮ ವನ್ನು ಜಿಲ್ಲಾಡಳಿತ ಹೊರಡಿಸದೆ.
ಕೇರಳದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನಲೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಠಿಣ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದ್ದು, ಅಗಸ್ಟ್ 10 ರವರೆಗೆ ಜಿಲ್ಲೆಯಲ್ಲಿ ಯಾವುದೇ ಸಭೆ ಸಮಾರಂಭ ನಡೆಸದಂತೆ ನಿಷೇಧ ಹೇರಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಡಾ. ರಾಜೇಂದ್ರ.ಕೆ.ವಿ. ಸಭೆ-ಸಮಾರಂಭಗಳು, ರಾಜಕೀಯ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಆಗಸ್ಟ್ 10 ರವರೆಗೆ ನಡೆಸದಂತೆ ಕ್ರಮ ಕೈಗೊಳ್ಳಬೇಕು. ಮದುವೆ ಕಾರ್ಯಕ್ರಮಗಳಿಗೆ ಕೇವಲ 50 ಜನರು ಮಾತ್ರ ಸೀಮಿತಗೊಳಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದಲ್ಲಿ ಕಲ್ಯಾಣ ಮಂಟಪಗಳ ಮಾಲೀಕರ ಮೇಲೆ ಪ್ರಕರಣ ದಾಖಲಿಸಬೇಕು. ಈ ಬಗ್ಗೆ ನಿಗಾ ವಹಿಸಲು ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದರು.
ಕೋವಿಡ್ ಸೋಂಕಿತರು ಹೋಂ ಕ್ವಾರಂಟೈನ್‍ನಲ್ಲಿ ಇರುವ ಬಗ್ಗೆ ತಹಶೀಲ್ದಾರ್‌ಗಳು, ತಾಲ್ಲೂಕು ವೈದ್ಯಾಧಿಕಾರಿಗಳು ಸೂಕ್ತ ನಿರ್ಣಯ ಕೈಗೊಳ್ಳಬೇಕು. ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಜನಸಂದಣಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ 45 ವರ್ಷ ಮೇಲಿನವರಿಗೆ ಶೇ 60 ರಷ್ಟು ಆನ್‍ಲೈನ್ ನೋಂದಣಿ ಮತ್ತು ಶೇ 40 ನೇರವಾಗಿ, 18 ವರ್ಷ ಮೇಲಿನವರಿಗೆ ಶೇ 80 ರಷ್ಟು ಆನ್‍ಲೈನ್ ನೋಂದಣಿ ಮತ್ತು ಶೇ 20 ನೇರವಾಗಿ ಲಸಿಕೆ ನೀಡಬೇಕು ಎಂದು ತಿಳಿಸಿದರು.