ಸಮಗ್ರ ನ್ಯೂಸ್: ಬಾಗಲಕೋಟೆಯಲ್ಲಿ ಒಂದು ವಿಚಿತ್ರ ಘಟನೆ ವರದಿಯಾಗಿದೆ. ಪ್ರಜ್ಞೆ ತಪ್ಪಿದ್ದ ಮಗು ಮೃತಪಟ್ಟಿದೆ ಎಂದು ಭಾವಿಸಿದ ಪೋಷಕರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದಾರೆ. ಆದರೆ ಅಷ್ಟರಲ್ಲಿ ಮಗು ಕೆಮ್ಮಿದೆ . ಈ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ನಲ್ಲಿ ನಡೆದಿದೆ.
ಬಸವರಾಜ ಭಜಂತ್ರಿ ಹಾಗೂ ನೀಲಮ್ಮ ಎಂಬ ದಂಪತಿಯ ದ್ಯಾಮಣ್ಣ ಭಜಂತ್ರಿ ಎಂಬ 13 ತಿಂಗಳ ಹಸುಗೂಸು ಉಸಿರಾಟ ತೊಂದರೆ, ಹೃದಯ ಸಂಬಂಧಿ ಖಾಯಿಲೆ ಸೇರಿದಂತೆ ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿತ್ತು. ಹುಟ್ಟಿದಾಗಿನಿಂದ ಮಗು ಸಮಸ್ಯೆ ಎದುರಿಸುತ್ತಿತ್ತು. ಕಳೆದ ನಾಲ್ಕು ದಿನಗಳಿಂದ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಮಗು ಬದುಕುವುದು ಕಷ್ಟ ಎಂದು ಹೇಳಿದ್ದರು. ಹೀಗಾಗಿ ಮಗುವನ್ನು ಪೋಷಕರು ಆಸ್ಪತ್ರೆಯಿಂದ ವಾಪಸ್ ಕರೆದೊಯ್ದಿದ್ದಾರೆ. ಅಷ್ಟರಲ್ಲಿ ಮಗು ಪ್ರಜ್ಞೆ ತಪ್ಪಿತ್ತು. ಮಗು ಮೃತಪಟ್ಟಿದೆ ಎಂದು ಪೋಷಕರು ಸಂಬಂಧಿಕರಿಗೆ ಸಾವಿನ ಸುದ್ದಿ ಮುಟ್ಟಿಸಿದ್ದರು.
ಸಂಬಂಧಿಕರೆಲ್ಲ ಮನೆಗೆ ಆಗಮಿಸಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗುತ್ತಿತ್ತು. ಅಷ್ಟರಲ್ಲಿ ಮಗು ಕೆಮ್ಮಿದೆ. ಸತ್ತ ಮಗು ಪುನಃ ಬದುಕಿದೆ. ಇದು ಮುರ್ತುಜಾ ಖಾದ್ರಿ ಪವಾಡ ಎಂದು ಪೋಷಕರು ಹಾಗೂ ಸಂಬಂಧಿಕರು ಮಗುವನ್ನು ದರ್ಗಾಕ್ಕೆ ಕರೆದೊಯ್ದಿದ್ದಾರೆ. ಸದ್ಯ ಇಳಕಲ್ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.