ಸಮಗ್ರ ನ್ಯೂಸ್: ಮಹತೋಭಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಾಯಿ ಶ್ರೀನಿವಾಸ್ ರಾಮಲಿಂಗೇಶ್ವರ ರಾವ್ ಅವರು ಸೇವಾರೂಪದಲ್ಲಿ ಸಮರ್ಪಿಸುವ ನೂತನ ಬಂಡಿ ರಥವು ಮೆರವಣಿಗೆಯೊಂದಿಗೆ ಸೋಮವಾರ ಕುಕ್ಕೆಗೆ ತಲುಪಿತು. ಆನೆ, ಬಿರುದಾವಳಿ ಮತ್ತು ಬ್ಯಾಂಡ್ ವಾದ್ಯಗಳ ನಿನಾದದೊಂದಿಗೆ ರಥವನ್ನು ಸ್ವಾಗತಿಸಲಾಯಿತು.
ರಥವನ್ನು ಕಾಶಿಕಟ್ಟೆ ಮಹಾಗಣಪತಿ ಸನ್ನಿಧಾನದಲ್ಲಿ ಸ್ವಾಗತಿಸಲಾಯಿತು. ಮಹಾಗಣಪತಿಗೆ ಪೂಜೆ ನೆರವೇರಿಸಿದ ಬಳಿಕ ಪುರೋಹಿತ ಪ್ರಸಾದ್ ಕಲ್ಲೂರಾಯ ನೂತನ ಬಂಡಿ ರಥಕ್ಕೆ ಪೂಜೆ ನೆರವೇರಿಸಿದರು. ಬಳಿಕ ದೇವಳದ ಆಡಳಿತಾಧಿಕಾರಿ, ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮೊಹಪಾತ್ರ ಅವರು ರಥಕ್ಕೆ ಪುಷ್ಪಾರ್ಚನೆ ಮಾಡಿದರು.
ಬಳಿಕ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಕೋಟೇಶ್ವರ, ದೇವಳದ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ, ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಎಸ್.ಇಂಜಾಡಿ, ಸೇವಾರ್ಥಿಗಳ ಆಪ್ತರಾದ ಮೋಹನದಾಸ ರೈ, ರಥ ನೀಡುವಲ್ಲಿ ಸಹಕರಿಸಿದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಶ್ರೀವತ್ಸ ಬೆಂಗಳೂರು, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯೆ ವಿಮಲಾ ರಂಗಯ್ಯ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಕೃಷ್ಣಮೂರ್ತಿ ಭಾಗವಹಿಸಿದ್ದರು.