ಸಮಗ್ರ ನ್ಯೂಸ್ : ಕಳೆದ ಹಲವು ದಿನಗಳಿಂದ ಸ್ಥಳೀಯ ವಾಹನಗಳಿಗೆ ಫಾಸ್ಟ್ ಟ್ಯಾಗ್ ನಲ್ಲಿ ಶುಲ್ಕ ಕಡಿತವಾಗುತ್ತಿರುವುದನ್ನು ವಿರೋಧಿಸಿ ಸ್ಥಳೀಯರು ಸಾಸ್ತಾನ ಟೋಲ್ ಗೇಟ್ ಗೆ ಮುತ್ತಿಗೆ ಹಾಕಿದರು.
ಈ ಹಿಂದೆ ಹಲವು ಬಾರಿ ಪ್ರತಿಭಟನೆ ಹಾಗೂ ಮನವಿ ನೀಡಿದ ಬಳಿಕ ಸಾಸ್ತಾನ ಟೋಲ್ ಪ್ಲಾಝಾದಲ್ಲಿ ಸ್ಥಳೀಯರಿಗೆ ಕೆಲವು ವರ್ಷಗಳಿಂದ ಶುಲ್ಕ ವಿನಾಯತಿ ನೀಡಲಾಗುತ್ತಿತ್ತು. ಆದರೆ ಈಗ ನವಯುಗ ಕಂಪೆನಿ ಟೋಲ್ ಪ್ಲಾಜಾವನ್ನು ಹೊಸ ಕಂಪೆನಿಗೆ ಮಾರಾಟ ಮಾಡಿದ್ದು,
ಆ ಬಳಿಕದಿಂದ ಸ್ಥಳೀಯ ವಾಹನಗಳಿಗೂ ಫಾಸ್ಟ್ಯಾಗ್ ಮೂಲಕ ಅನಧಿಕೃತವಾಗಿ ಶುಲ್ಕವನ್ನು ಪಡೆಯಲಾಗುತ್ತಿದೆ. ಇದನ್ನು ವಿರೋಧಿಸಿ ಸ್ಥಳೀಯ ವಾಹನ ಚಾಲಕರು ಮತ್ತು ಮಾಲೀಕರು ಸಭೆ ಸೇರಿ ಟೋಲ್ ಕಂಪೆನಿಯ ವರ್ತನೆಯ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು.
ಸುಮಾರು 500ಕ್ಕೂ ಅಧಿಕ ಸಂಖೆಯಲ್ಲಿ ಸೇರಿದ್ದ ಸ್ಥಳೀಯರು ಟೋಲ್ ಪ್ಲಾಝಾಕ್ಕೆ ತೆರಳಿ ಮುತ್ತಿಗೆ ಹಾಕಿ ಟೋಲ್ ಕಂಪೆನಿಯ ವಿರುದ್ಧ ಘೋಷಣೆ ಕೂಗಿದರು. ಟೋಲ್ ರಸ್ತೆಗೆಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಶುಲ್ಕ ವಿನಾಯತಿ ಆದೇಶವನ್ನು ಉಲ್ಲಂಘಿಸಿ ಮತ್ತೆ ಟೋಲ್ ಪಡೆಯುತ್ತಿದ್ದು, ಇದನ್ನು ತಕ್ಷಣವೇ ನಿಲ್ಲಿಸಬೇಕು. ಈ ಹಿಂದಿನಂತೆ ಟೋಲ್ ವಿನಾಯಿತಿ ನೀಡಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.