ಸಮಗ್ರ ನ್ಯೂಸ್: ಹುಬ್ಬಳ್ಳಿಯಲ್ಲಿ ಅಂಜಲಿಯನ್ನು ಕೊಂದು ತಲೆ ತಪ್ಪಿಸಿಕೊಂಡಿದ್ದ ಆರೋಪಿ ಗಿರೀಶ್, ರೈಲಿನಲ್ಲಿ ಮತ್ತೊಬ್ಬ ಮಹಿಳೆಯ ಕೊಲೆಗೆ ಯತ್ನಿಸಿದ್ದಾನೆ ಎಂಬ ಮಾಹಿತಿ ಹೊರಬಿದ್ದಿದೆ. ಕೊಲೆ ಯತ್ನಕ್ಕೆ ಒಳಗಾದ ಮಹಿಳೆ ಈ ಕುರಿತು ದಾವಣಗೆರೆಯಲ್ಲಿ ದೂರು ನೀಡಿದ್ದಾರೆ.
ಗದಗ ಮೂಲದ ಲಕ್ಷ್ಮೀ ಹಾಗೂ ಗಂಡ ಮಹಾಂತೇಶ್ ಸವಟೂರು ಪ್ರಕರಣ ದಾಖಲಿಸಿದ್ದಾರೆ. ತುಮಕೂರಿನಿಂದ ವಿಶ್ವಮಾನವ ಎಕ್ಸಪ್ರೆಸ್ ಟ್ರೈನ್‌ನಲ್ಲಿ ಪತಿ ಜೊತೆ ಇವರು ಪ್ರಯಾಣಿಸುತ್ತಿದ್ದರು. ಆಗ ಅಂಜಲಿ ಕೊಲೆ ಆರೋಪಿ ಗಿರೀಶ್ ಹಲ್ಲೆ ಮಾಡಿದ್ದ. ಅರಸೀಕೆರೆ ನಿಲ್ದಾಣದಲ್ಲಿ ಜನರಲ್ ಬೋಗಿ ಹತ್ತಿಕೊಂಡ ಆರೋಪಿ ಗಿರೀಶ್, ರೈಲು ಹತ್ತಿದ ನಂತರ ಸಂತ್ರಸ್ತೆಯನ್ನು ಕೆಟ್ಟ ದೃಷ್ಟಿಯಲ್ಲಿ ನೋಡುತ್ತಿದ್ದ. ಚಿಕ್ಕಜಾಜೂರಿನ ರೈಲು ನಿಲ್ದಾಣದಲ್ಲಿ ಮಹಿಳೆ ರೆಸ್ಟ್ ರೂಂಗೆ ಹೋದಾಗ ಆಕೆಯನ್ನು ಹಿಂಬಾಲಿಸಿದ್ದ. ರೆಸ್ಟ್ ರೂಂ ಕಿಂಡಿಯಿಂದ ಗಮನಿಸುತ್ತಿದ್ದ. ಇದರಿಂದ ಸಿಟ್ಟಿಗೆದ್ದ ಮಹಿಳೆ, ನಿನಗೆ ಅಕ್ಕತಂಗಿಯರಿಲ್ವಾ ಎಂದು ದಬಾಯಿಸಿದ್ದರು. ಆಗ ಮಹಿಳೆಗೆ ಚಾಕು ತೋರಿಸಿ ಗಿರೀಶ್ ಚುಚ್ಚಲು ಮುಂದಾಗಿದ್ದ.
ನಂತರ ಪ್ರಯಾಣಿಕರು ಬಂದು ಸುತ್ತುವರಿದಾಗ, ಚಲಿಸುತ್ತಿದ್ದ ರೈಲು ಗಾಡಿಯಿಂದಲೇ ಆಸಾಮಿ ಜಿಗಿದಿದ್ದಾನೆ. ಮಹಿಳೆಯ ಕೈಗೆ ಚುಚ್ಚಿದ ಗಾಯವಾಗಿದೆ. ನಂತರ ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಗೆ ಸಂತ್ರಸ್ತೆ ಆಗಮಿಸಿ ಚಿಕಿತ್ಸೆ ಪಡೆದಿದ್ದಾರೆ. ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ. ಆದರೆ ಮಾಯಕೊಂಡ ಬಳಿ ಈ ಆರೋಪಿ ರೈಲಿನಿಂದ ಕೆಳಗೆ ಧುಮುಕಿದ್ದ ಇತನನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದರು. ಹಲ್ಲೆಗೊಳಗಾದ ಮಹಿಳೆಯನ್ನೂ ಆಸ್ಪತ್ರೆಗೆ ಕರೆದೊಯ್ದಿದ್ದರು. ಮಾಧ್ಯಮಗಳಲ್ಲಿ ಬಂದಿದ್ದ ಗಿರೀಶ್ ಫೋಟೋ ನೋಡಿದ್ದ ರೈಲ್ವೆ ಪೊಲೀಸರು, ಕೊಲೆ ಆರೋಪಿಯನ್ನು ಗುರುತಿಸಿದ್ದರು. ಕೂಡಲೇ ಹುಬ್ಬಳ್ಳಿ ಪೊಲೀಸರಿಗೆ ಮಾಹಿತಿ ನೀಡಿ ಬಂಧಿಸಿದ್ದಾರೆ.