ಸಮಗ್ರ ನ್ಯೂಸ್ : ಕಳೆದ 20 ವರ್ಷಗಳಿಂದ ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ಮಳೆ ಬಂದರೆ ಮನೆಗಳಿಗೆ ನೀರು ನುಗ್ಗುತ್ತದೆ. ಕೊಳಚೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದ್ದು, ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ನಮ್ಮ ಸಮಸ್ಯೆಯನ್ನು ಬಗೆಹರಿಸಿ ಇಲ್ಲದಿದ್ದರೆ ನಮಗೆ ಒಂದು ತೊಟ್ಟು ವಿಷ ಕೊಟ್ಟು ಬಿಡಿ ಎಂದು ಗ್ರಾಮಸ್ಥರು ಗ್ರಾಮವನ್ನು ತೊರೆಯಲು ಮುಂದಾಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವರಾಯಶೆಟ್ಟಿಪುರ ಗ್ರಾಮದ ಹೊಸ ಬಡಾವಣೆಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ನಿವಾಸಿಗಳು ಪರಿತಪಿಸುತ್ತಿದ್ದಾರೆ. ಶಾಸಕ ದರ್ಶನ್ ಧ್ರುವನಾರಾಯಣ್ ಪ್ರತಿನಿಧಿಸುವ ನಂಜನಗೂಡು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ದೇವರಾಯಶೆಟ್ಟಿ ಪುರ ಗ್ರಾಮದಲ್ಲಿ ನಿವಾಸಿಗಳು ಅಕ್ಷರಶಃ ರೊಚ್ಚಿಗೆದ್ದಿದ್ದಾರೆ.
ಗ್ರಾಮದ ಹೆಚ್.ಎಂ ಮಹದೇವಪ್ಪ ಎಂಬಾತ 2022 ರಲ್ಲಿ ತಹಶೀಲ್ದಾರ್ ಮತ್ತು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮದ ಸರ್ವೆ ನಂಬರ್ 32/1ರಲ್ಲಿ ಬರುವ ಜಮೀನಿನಲ್ಲಿ ಸುಮಾರು 10 ಅಡಿ ಜಾಗವನ್ನು ಸಾರ್ವಜನಿಕರು ತಿರುಗಾಡಲೆಂದು 80 ಸಾವಿರ ರೂ. ಹಣ ಪಡೆದು ಜಾಗವನ್ನು ಬಿಟ್ಟುಕೊಟ್ಟಿದ್ದಾರೆ.
ಆದರೆ, ಜಮೀನಿನ ಮಾಲೀಕ ರಸ್ತೆ ನನಗೆ ಸೇರಿದ್ದು ಎಂದು ಮತ್ತೆ ಖ್ಯಾತೆ ತೆಗೆದು ಗ್ರಾಮಸ್ಥರಿಗೆ ತಿರುಗಾಡುವ ರಸ್ತೆಯನ್ನು ಬಂದ್ ಮಾಡಿದ್ದಾನೆ. ಇದರಿಂದ ನಿವಾಸಿಗಳು ಓಡಾಡಲು ತುಂಬಾ ತೊಂದರೆಯಾಗಿದೆ. ಅಲ್ಲದೆ ಬೀದಿಯಲ್ಲಿ ಚರಂಡಿಯ ವ್ಯವಸ್ಥೆ ಇಲ್ಲದೆ, ಕೊಳಚೆ ನೀರು ಮನೆಯ ಮುಂದೆಯೇ ಹರಿಯುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿದ್ದಾರೆ.
ಮಳೆ ಬಂದಾಗ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸುತ್ತಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ರೊಚ್ಚಿಗೆದ್ದು ಸ್ವಂತ ಖರ್ಚಿನಲ್ಲಿ ಜೆಸಿಬಿಯಿಂದ ಚರಂಡಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮನೆಗಳು ಜಲಾವೃತವಾಗಿವೆ. ಇದೇ ರೀತಿ ಮುಂದುವರೆದರೆ ನಾವು ಗ್ರಾಮವನ್ನೇ ತೊರೆಯುತ್ತೇವೆ.
ನಮ್ಮ ಸಮಸ್ಯೆಯನ್ನು ಕೂಡಲೇ ಬಗೆಹರಿಸಿ ಇಲ್ಲದಿದ್ದರೆ ಕುಟುಂಬ ಸಮೇತ ತಾಲ್ಲೂಕು ಕಛೇರಿಯಲ್ಲಿ ಉಗ್ರ ಹೋರಾಟವನ್ನು ನಡೆಸಲಾಗುತ್ತದೆ ಅಲ್ಲಿಯ ತನಕ ನಮಗೆ ಒಂದು ತೊಟ್ಟು ವಿಷ ಕೊಟ್ಟುಬಿಡಿ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.