ಸಮಗ್ರ ನ್ಯೂಸ್: ಮದುವೆಯಲ್ಲಿ ಸ್ವೀಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಕಲ್ಯಾಣ ಮಂಟಪದಲ್ಲೇ ಮದುವೆ ಮುರಿದುಬಿದ್ದ ವಿಚಿತ್ರ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ನಡೆದಿದೆ.
ಹಾನಗಲ್‌ನ ಯುವತಿ ಜೊತೆಗೆ ತುಮಕೂರಿನ ಹರ್ಷಿತ್ ಎಂಬಾತನೊಂದಿಗೆ ವಿವಾಹ ನಿಶ್ಚಯವಾಗಿತ್ತು. ವಧು-ವರರಿಬ್ಬರು ಮ್ಯಾಟ್ರಿಮೊನಿಯಲ್ಲಿ ಪರಿಚಯವಾಗಿ, ಯುವತಿಯನ್ನು ವಿವಾಹವಾಗಲು ಹರ್ಷಿತ್ ಒಪ್ಪಿಕೊಂಡಿದ್ದ. ಆದರೆ ಮದುವೆಯ ಹಿಂದಿನ ದಿನ ಚಪ್ಪರ ಶಾಸ್ತ್ರದಲ್ಲಿ ವರನ ಕಡೆಯವರಿಗೆ ಊಟದಲ್ಲಿ ಸಿಹಿತಿಂಡಿ ನೀಡಿಲ್ಲ ಎಂದು ಸಣ್ಣ ಗಲಾಟೆ ಮಾಡಿ ರಾತ್ರಿ ಮದುವೆಯೇ ಬೇಡ ಎಂದು ವರ ಉಂಗುರ ಕಳಚಿಕೊಟ್ಟಿದ್ದಾನೆ. ಘಟನೆಯಿಂದ ಬೇಸತ್ತ ವಧು ಕೂಡ ಮದುವೆಯೇ ಬೇಡ ಎಂದು ಪೊಲೀಸರೆದುರು ಹೇಳಿಕೆ ನೀಡಿದ್ದಾಳೆ.
ಆದರೆ ಈಗ ವಿವಾಹ ಮುರಿದು ಬೀಳಲು ವರದಕ್ಷಿಣೆ ಕಿರುಕುಳ ಕಾರಣವೆಂದು ವಧುವಿನ ಕಡೆಯವರು ಆರೋಪಿಸುತ್ತಿದ್ದಾರೆ. ವರನ ಕಡೆಯವರು ಕೇಳಿದಷ್ಟು ಚಿನ್ನ ಮಾಡಿಲ್ಲವೆಂಬ ಕಾರಣಕ್ಕೆ ಮದುವೆ ಮುರಿದಿದ್ದಾರೆ ಎಂದು ಆರೋಪಿಸುತ್ತಿದ್ದಾರೆ ವರನ ಕಡೆಯವರು 100 ಗ್ರಾಂ ಚಿನ್ನ ಕೇಳಿದ್ದು 60 ಗ್ರಾಂ ಚಿನ್ನ ನೀಡಲಾಗಿತ್ತು. ಅಲ್ಲದೆ ದಂಪತಿ ವಾಸ ಮಾಡಲು ಮನೆ ಬೊಗ್ಯಕ್ಕೆ ಹಾಕಲು 10 ಲಕ್ಷ ರೂ ಕೇಳಿದ್ದರಂತೆ. ಆದರೆ ಆ ಹಣ ನೀಡಲು ಆಗಿರಲಿಲ್ಲ. ಈ ಎಲ್ಲಾ ಕಾರಣದಿಂದ ಮದುವೆ ಮುರಿದಿದ್ದಾರೆ ಎಂದು ಸೋಮವಾರಪೇಟೆ ಪೋಲಿಸ್ ಠಾಣೆಯಲ್ಲಿ ವಧುವಿನ ಕಡೆಯವರು ದೂರನ್ನು ನೀಡಿದ್ದಾರೆ.