ಸಮಗ್ರ ನ್ಯೂಸ್ : ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು, ವಿಜ್ಡಮ್ ಸಂಸ್ಥೆಗಳ ಸಹಯೋಗದೊಂದಿಗೆ ಉದ್ಯೋಗ ಮೇಳವನ್ನು ಮೇ 4ರಂದು ಬೆಳಿಗ್ಗೆ 9 ರಿಂದ ಸಂಜೆ 4:30ರವರೆಗೆ ಮಿಲಾಗ್ರಿಸ್ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದೆ ಎಂದು ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿನ್ಸೆಂಟ್ ಆಳ್ವ ತಿಳಿಸಿದ್ದಾರೆ.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ, ಬಿಸಿಎ ಪದವೀಧರಲ್ಲದೇ, ವಾಣಿಜ್ಯ ಮತ್ತು ನಿರ್ವಹಣೆ, ಇಂಜಿನಿಯರಿಂಗ್, ಡಿಪ್ಲೋಮಾ ವಿದ್ಯಾರ್ಥಿಗಳು ನೊಂದಣಿಯನ್ನು ಮಾಡಿಕೊಳ್ಳಬಹುದಾಗಿದೆ. ಎಸೆಸೆಲ್ಸಿ ಬಳಿಕ ಡಿಪ್ಲೋಮ, ಐಟಿಐ ಕಲಿತ, ಪದವಿ ಪೂರ್ವ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೂ ಅವಕಾಶಗಳಿವೆ ಎಂದರು.
ಎಂಟು ಐಟಿ ಕಂಪೆನಿಗಳು, ಎಂಟು ಹಾಸ್ಪಿಟಾಲಿಟಿ ಕಂಪೆನಿ, ಐದು ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ ಏವಿಯೇಷನ್, ಗೇಮಿಂಗ್, ಫಾರ್ಮಾ, ನರ್ಸಿಂಗ್, ಐಟಿ ಸಾಫ್ಟ್‌ವೇರ್, ಅಟೋಮೊಬೈಲ್, ಜವಳಿ, ಮೊಬೈಲ್ ವಿತರಣೆ ಸೇರಿದಂತೆ 45 ಕಂಪೆನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುವುದನ್ನು ಖಾತ್ರಿ ಪಡಿಸಿವೆ ಎಂದು ತಿಳಿಸಿದರು.
ಸುಮಾರು 1000 ಮಂದಿ ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಈಗಾಗಲೇ 625 ಮಂದಿ ಹೆಸರು ನೊಂದಾಯಿಸಿಕೊಂಡಿದ್ದಾರೆ. ಇಲ್ಲಿ 500ಕ್ಕೂ ಅಧಿಕ ಉದ್ಯೋಗಗಳು ಲಭ್ಯವಿರುವ ನಿರೀಕ್ಷೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಉಪಪ್ರಾಂಶುಪಾಲೆ ಪ್ರೊ.ಸೋಫಿಯಾ ಡಯಾಸ್, ಡಾ.ಜಯರಾಮ ಶೆಟ್ಟಿಗಾರ್, ಕಾರ್ತಿಕ್ ನಾಯಕ್, ರವಿನಂದನ್ ಭಟ್ ಉಪಸ್ಥಿತರಿದ್ದರು.