ಸಮಗ್ರ ನ್ಯೂಸ್ : ಪ್ರೀತಿ ನಿರಾಕರಿಸಿದ ಕಾರಣಕ್ಕೆ ಹತ್ಯೆಗೀಡಾದ ನೇಹಾ ಕುಟುಂಬವನ್ನು ನಿನ್ನೆ ಅಮಿತ್ ಶಾ ಅವರು ಭೇಟಿ ಮಾಡಿ ಸಾಂತ್ವಾನ ತಿಳಿಸಿದರು. ಅವರು ಹುಬ್ಬಳ್ಳಿಗೆ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಪರ ಪ್ರಚಾರಕ್ಕೆಂದು ಬುಧವಾರ ಆಗಮಿಸಿದ್ದ ವೇಳೆ ನೇಹಾ ತಂದೆ-ತಾಯಿ ನ್ಯಾಯ ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಲಾಗಿದೆ.
ನೇಹಾ ತಂದೆ ನಿರಂಜನ್ ಹಿರೇಮಠ ಅವರು, ತಾವೊಬ್ಬ ಕಾಂಗ್ರೆಸ್ ಕಾರ್ಪೊರೇಟರ್ ಆಗಿದ್ದರೂ ಮಗಳ ಹತ್ಯೆ ಪ್ರಕರಣದಲ್ಲಿ ಸರಿಯಾಗಿ ನ್ಯಾಯ ದಕ್ಕಿಸಿಕೊಳ್ಳಲು ಆಗುತ್ತಿಲ್ಲವೆಂದು ಅಮಿತ್ ಶಾ ಅವರೆದುರು ನೋವನ್ನು ಹೇಳಿಕೊಂಡಿದ್ದಾರೆ.
ಮಗಳು ನೇಹಾಳ ಹತ್ಯೆ ಹಿನ್ನೆಲೆ ಮತ್ತು ಈವರೆಗೆ ಆದ ಬೆಳವಣಿಗೆಗಳ ಕುರಿತು ಕಾರ್ಪೊರೇಟರ್ ನಿರಂಜನ್ ಅವರು ಕೇಂದ್ರ ಗೃಹ ಸಚಿವರೆದುರು ವಿವರಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೇಹಾ ತಂದೆ-ತಾಯಿಗೆ ಸಾಂತ್ವನ ಹೇಳಿದರಲ್ಲದೆ, ನಾವಿದ್ದೇವೆ ಹೆದರಬೇಡಿ ಎಂದು ಆತ್ಮಸ್ಥೈರ್ಯ ತುಂಬಿದರು.
ನೇಹಾ ಪ್ರಕರಣವನ್ನ ವಿಜಯ ಸಂಕಲ್ಪ ಯಾತ್ರೆಯಲ್ಲಿ ಅಮಿತ್ ಶಾ ಉಲ್ಲೇಖಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮಹಿಳೆಯರ ರಕ್ಷಣೆ ನಿಮಗೆ ಆಗದಿದ್ದಲ್ಲಿ ಹೇಳಿ ನಾವು ಸುರಕ್ಷಿತವಾಗಿ ಇಡ್ತೇವೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.