ಸಮಗ್ರ ನ್ಯೂಸ್: ಆಂಧ್ರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್(ಎನ್‍ಡಿಎ) ಜಂಟಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಅರ್ಹ ಮಹಿಳೆಯರಿಗೆ ಮಾಸಿಕ ರೂ. 1,500 ಪಿಂಚಣಿ ಮತ್ತು ನಿರುದ್ಯೋಗಿ ಯುವಕರಿಗೆ ಮಾಸಿಕ ರೂ. 3,000 ಹಣಕಾಸಿನ ನೆರವನ್ನು ಘೋಷಿಸಿದೆ. ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್, ಟಿಡಿಪಿಯ ‘ಸೂಪರ್ ಸಿಕ್ಸ್ ಮತ್ತು ನಮ್ಮ ಪಕ್ಷದ ‘ಶನ್ಮುಕ್ತ ವ್ಯೂಹಂ’ ಪರಿಕಲ್ಪನೆಯ ಸಂಯೋಜನೆಯೇ ಈ ಪ್ರಣಾಳಿಕೆ ಎಂದು ಹೇಳಿದರು.
ಮಹಿಳೆಯರಿಗೆ ಸರ್ಕಾರಿ ಬಸ್‍ನಲ್ಲಿ ಉಚಿತ ಪ್ರಯಾಣ, ಪ್ರತಿ ಮನೆಗೆ ವಾರ್ಷಿಕ ಮೂರು ಉಚಿತ ಸಿಲಿಂಡರ್ ಮತ್ತು ವ್ಯಾಸಂಗ ಮಾಡುತ್ತಿರುವ ಪ್ರತಿ ವಿದ್ಯಾರ್ಥಿಗೆ ವಾರ್ಷಿಕ ರೂ. 15,000 ಸಹಾಯಧನದ ಭರರವಸೆ ಸೇರಿದಂತೆ ಹಲವು ಆಶ್ವಾಸನೆಗಳನ್ನೊಳಗೊಂಡ ‘ಸೂಪರ್ ಸಿಕ್ಸ್’ ಪ್ರಣಾಳಿಕೆಯನ್ನು ಈ ಹಿಂದೆ ಟಿಡಿಪಿ ಬಿಡುಗಡೆ ಮಾಡಿತ್ತು.
ಆಂಧ್ರ ಪ್ರದೇಶದಲ್ಲಿ ಎನ್‍ಡಿಎ ಸೀಟು ಹಂಚಿಕೆ ಪ್ರಕಾರ, ಟಿಡಿಪಿ 144 ವಿಧಾನಸಭಾ ಕ್ಷೇತ್ರಗಳು ಮತ್ತು 17 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಬಿಜೆಪಿ 6 ಲೋಕಭಾ ಮತ್ತು 10 ವಿಧಾನಸಭಾ ಕ್ಷೇತ್ರಗಳಲ್ಲಿ ಜನಸೇನಾ 2 ಲೋಕಸಭಾ ಕ್ಷೇತ್ರ ಮತ್ತು 21 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ಆಂಧ್ರ ಪ್ರದೇಶದ 175 ವಿಧಾನಸಭಾ ಕ್ಷೇತ್ರಗಳು ಮತ್ತು 25 ಲೋಕಸಭಾ ಕ್ಷೇತ್ರಗಳಲ್ಲಿ ಮೇ 13ರಂದು ಮತದಾನ ನಡೆಯಲಿದೆ. ಜೂನ್ 4ಕ್ಕೆ ಫಲಿತಾಂಶ ಹೊರಬೀಳಲಿದೆ.